ರಾಜ್ಯದಲ್ಲಿ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆ ರೈತರು, ಸಹಕಾರ ಸಂಘಗಳ ಸದಸ್ಯರು ಸೇರಿದಂತೆ ಬಡಜನತೆಗೆ ಅನುಕೂಲಕರವಾಗಿತ್ತು. ಆದರೆ ಬಳಿಕ ಕೇಂದ್ರ ಸರ್ಕಾರ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೊಳಿಸಿದ ಕಾರಣ ಯಶಸ್ವಿನಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.
‘ಆಯುಷ್ಮಾನ್ ಭಾರತ್’ ಜೊತೆ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜೋಡಣೆಗೊಳಿಸಿದರೂ ಕೂಡ ಇದರ ಪ್ರಯೋಜನ ರಾಜ್ಯದ ಜನತೆಗೆ ಅಷ್ಟಾಗಿ ದೊರಕಲಿಲ್ಲ. ಹೀಗಾಗಿ ಯಶಸ್ವಿನಿ ಯೋಜನೆಯನ್ನು ಜಾರಿಗೆ ತರಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿತ್ತು.
ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಯಶಸ್ವಿನಿ ಯೋಜನೆಯನ್ನು ಮರು ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ಆಯವ್ಯಯದಲ್ಲಿ 300 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಅಲ್ಲದೆ ಸದಸ್ಯರಿಂದ ವಾರ್ಷಿಕ ವಂತಿಕೆಯ ರೂಪದಲ್ಲಿ 100 ಕೋಟಿ ರೂಪಾಯಿ ಸಂಗ್ರಹಿಸಲು ಚಿಂತನೆ ನಡೆಸಲಾಗಿದೆ. ಯಶಸ್ವಿನಿ ಯೋಜನೆಯ ಮರು ಅನುಷ್ಠಾನಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಇಂದು ಚಾಲನೆ ನೀಡಲಿದ್ದಾರೆ.