ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಹಲವು ವಿಚಾರಗಳು, ಬೆಳವಣಿಗೆಗಳು ನಡೆಯುತ್ತಿವೆ. ಸಾರ್ವಜನಿಕ ವಲಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೋಮುವಾದ ಜಾಗತಿಕ ಸಂಘರ್ಷವಾಗುತ್ತಿದೆ. ಐಟಿಬಿಟಿ ಕ್ಷೇತ್ರದಲ್ಲಿ ಇಂತಹ ಬೆಳವಣಿಗೆಯಾದರೆ ಕರ್ನಾಟಕದ ಜಾಗತಿಕ ನಾಯಕತ್ವ ನಾಶವಾಗಲಿದೆ ಎಂದು ರಾಜ್ಯದ ಬೆಳವಣಿಗೆಗಳ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ ಮಜುಂದಾರ್ ಷಾ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಹಿಜಾಬ್, ಸಮವಸ್ತ್ರದ ವಿಷಯ ಈಗಾಗಲೇ ಇತ್ಯರ್ಥವಾಗಿದೆ. ಯಾವುದೇ ವಿಚಾರ, ವಿಷಯವಿರಲಿ, ನಮ್ಮ ನಮ್ಮ ನಂಬಿಕೆಗಳ ಆಧಾರದ ಮೇಲೆ ಇಷ್ಟು ವರ್ಷಗಳ ಕಾಲ ನಾವೆಲ್ಲರೂ ಬದುಕು ನಡೆಸುತ್ತಿದ್ದೇವೆ. ಅಂತೆಯೆ ಶಾಂತಿ-ಸೌಹಾರ್ದತೆಯಿಂದ ಎಲ್ಲರೂ ಬಾಳಬೇಕು ಎಂದರು.
BIG NEWS: ಧಾರ್ಮಿಕ ವಿಭಜನೆ ಬಿಕ್ಕಟ್ಟು ತಡೆಯಿರಿ; ಮುಖ್ಯಮಂತ್ರಿಗಳಿಗೆ ಕಿರಣ್ ಮಜುಂಮ್ದಾರ್ ಷಾ ಮನವಿ
ಕರ್ನಾಟಕ ರಾಜ್ಯ ಶಾಂತಿಗೆ ಮತ್ತು ಪ್ರಗತಿಗೆ ಹೆಸರಾಗಿದೆ. ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲರೂ ಸಂಯಮವನ್ನು ತಾಳಬೇಕು. ಸಾಮಾಜಿಕವಾಗಿ ಹಲವಾರು ಸಮಸ್ಯೆಗಳು ಉದ್ಭವವಾಗುವ ಸಂದರ್ಭದಲ್ಲಿ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.