ಸ್ಯಾಂಡಲ್ ವುಡ್ ನಟ ದಿ. ಸಂಚಾರಿ ವಿಜಯ್ ಅವರ ಅಭಿನಯದ ತಲೆದಂಡ ಸಿನಿಮಾ ಇದೇ ಏಪ್ರಿಲ್ 1 ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಒಬ್ಬ ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ, ಹೋರಾಟದ ಕಥೆ ಹೊಂದಿದ್ದು, ಪಕ್ಕಾ ಕಂಟೆಂಟ್ ಬೇಸಡ್ ಸಿನಿಮಾವಾಗಿದೆ.
ಪ್ರವೀಣ್ ಕೃಪಾಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ತಲೆದಂಡ ಸಿನಿಮಾಗೆ ಹರಿಕಾವ್ಯ ಅವರ ಅದ್ಭುತ ಸಂಗೀತವಿದೆ. ಸಿನಿಮಾದಲ್ಲಿನ ಕೆಲಸ , ಸಂಗೀತದ ಕುರಿತಾಗಿ ಹರಿಕಾವ್ಯ ಅವರು ಕೆಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅಲ್ಲದೆ ತಲೆದಂಡ ಸಿನಿಮಾ ಮತ್ತು ತಾನು ಸಂಗೀತ ನಿರ್ದೇಶಕನಾಗಿ ಸಾಗಿ ಬಂದ ಹಾದಿಯನ್ನು ಹರಿಕಾವ್ಯ ಹೇಳುವುದು ಹೀಗೆ.
ತಲೆ ದಂಡ ಸಿನಿಮಾದ ಸಂಗೀತ ನಿದೇರ್ಶಕ ಹರಿ ಕಾವ್ಯ..!
ತಲೆದಂಡ ಚಿತ್ರಕಥೆ ಕೇಳ್ತಿದ್ದ ಹಾಗೆ ಪೂರ್ತಿ ಪರಿಸರದ ಒಂದು ಕಂಪ್ಲೀಟ್ ಚಿತ್ರಣ ಬರುತ್ತದೆ. ಆ ಚಿತ್ರಕ್ಕೆ ಸಂಗೀತ ಏನು ಮಾಡಬೇಕೆಂಬ ಯೋಚನೆ ಮಾಡಿದಾಗ ಆ ಪ್ರಕೃತಿಯ ಕಲರವವೇ ಮೊದಲು ತಲೆಗೆ ಬರುತ್ತೆ. ಹಾಗಾಗಿ ಈ ಚಿತ್ರಕ್ಕೆ ಪ್ರಕೃತಿಯೇ ಸಂಗೀತದ ಜೀವಾಳವಾಗಿದೆ ಅಂತಾರೆ ಹರಿಕಾವ್ಯ.
ಒಂದು ಹಳ್ಳಿ, ಮುಗ್ಧ ನಾಯಕ, ನಾಯಕಿ, ಎಲ್ಲಾ ಮುಗ್ಧರ ಪಾತ್ರಗಳೇ ಚಿತ್ರದಲ್ಲಿವೆ. ಅದ್ರಲ್ಲಿ ನಾಗರೀಕ ಸಮಾಜದ ಒಂದಷ್ಟು ಎಲಿಮೆಂಟ್ಸ್, ರಾಜಕೀಯದ ಸನ್ನಿವೇಶಗಳು ಒಳಗೊಂಡಿವೆ. ಪ್ರಕೃತಿಯನ್ನು ಉಳಿಸಲು ಮುಗ್ಧ ನಾಯಕನ ಹೋರಾಟವೇ ಚಿತ್ರದ ಹೈಲೈಟ್ಸ್ ಆಗಿದೆ ಎಂಬುದು ಹರಿಕಾವ್ಯ ಅವರ ಅಭಿಮತವಾಗಿದೆ.
ಪ್ರಕೃತಿ ಪ್ರೇಮ, ಪ್ರಕೃತಿಯನ್ನು ಉಳಿಸಬೇಕೆಂಬ ತುಡಿತದ ಜೊತೆಗೆ ಸೋಲಿಗರ ಜನಾಂಗದ ಹಾಡುಗಳು ಮತ್ತು ಸಾಂಪ್ರದಾಯಿಕ ಹಬ್ಬಗಳು ಈ ಚಿತ್ರದಲ್ಲಿರುವುದರಿಂದ ಸಾಕಷ್ಟು ಹೋಮ್ ವರ್ಕ್ ಕೂಡ ಮಾಡಿಕೊಳ್ಳಬೇಕಾಯ್ತು. ಪ್ರತಿ ಸನ್ನಿವೇಶಗಳಿಗೆ ಯಾವ ರೀತಿಯ ಸಂಗೀತ ನೀಡಬೇಕು ಎಂಬುದರ ಬಗ್ಗೆಯೂ ಸಾಕಷ್ಟು ಅಧ್ಯಯನ ನಡೆಸಬೇಕಾಯ್ತು. ಇನ್ನೊಂದೆಡೆ, ಜನಪದ ಗಾಯಕರನ್ನ ಸ್ಟುಡಿಯೋಗೆ ಕರೆಸಿಕೊಂಡು ಅವರಿಂದ ಹಾಡಿಸುವುದು ತುಂಬಾ ಕಾಂಪ್ಲಿಕೇಟೆಡ್ ಆಗಿತ್ತು. ರೆಕಾರ್ಡಿಂಗ್ ವೇಳೆ ಸಾಕಷ್ಟು ಶ್ರಮಪಟ್ಟಿದ್ದೇವೆ. ಪ್ರತಿ ಫ್ರೇಮ್, ಪ್ರತಿ ಬಿಟ್ ಹಾಡುಗಳಿಗೂ ತುಂಬಾನೇ ಎಫರ್ಟ್ ಹಾಕಿದ್ದೇವೆ ಎಂದು ಹೇಳ್ತಾರೆ ಹರಿಕಾವ್ಯ.
ತಲೆದಂಡ ಸಿನಿಮಾಗೆ ಶೂಟಿಂಗ್ ಗಿಂತಲೂ ಮುಂಚೆಯೇ ಬಿಟ್ ಗಳನ್ನ ರೆಡಿ ಮಾಡಿಟ್ಟುಕೊಂಡಿದ್ದೆ. ಒಟ್ಟಾರೆ 12 ಹಾಡುಗಳಿವೆ. ಎಲ್ಲವೂ ಬಿಟ್ ಸಾಂಗ್ ಗಳು. ಕಥೆಯ ಹೊರತಾಗಿ ಯಾವುದೇ ಒಂದು ಸಣ್ಣ ತುಣಕನ್ನೂ ಬಳಸಿಕೊಂಡಿಲ್ಲ. ಕಥೆಯ ಒಳಗೆ ಸಮ್ಮಿಲಿತವಾಗಿರುವಂತಹ ಸಂಗೀತವನ್ನು ನೀಡಿದ್ದೇನೆ ಎಂಬ ಸಮಾಧಾನ ಹರಿಕಾವ್ಯ ಅವರದ್ದು.
ಓವರ್ ಆಲ್ ಸಿನಿಮಾದ ಸಂಗೀತವನ್ನ ಆದಷ್ಟು ವೈಭವವಿಲ್ಲದೇ, ನ್ಯಾಚುರಲ್ ಆಗಿ ಕಥೆಗೆ ಹೊಂದಿಕೊಳ್ಳುವಂತೆ ಸಂಗೀತ ನಿರ್ದೇಶನ ಮಾಡಿದ್ದೇನೆ. ಹೆಚ್ಚಾಗಿ ಭಾರತೀಯ ಮ್ಯೂಸಿಕ್ ಇನ್ಸ್ಟ್ರುಮೆಂಟ್ಸ್ ಗಳನ್ನ ಬಳಸಿದ್ದೇನೆ. ಹೆಚ್ಚು ಹಿನ್ನೆಲೆಯಲ್ಲಿ ಧ್ವನಿಯನ್ನೇ ಬಳಸಿಕೊಂಡಿದ್ದೇನೆ ಎಂದು ತಲೆ ದಂಡ ಸಿನಿಮಾದ ಸಂಗೀತದ ಬಗ್ಗೆ ಹರಿಕಾವ್ಯ ಹೇಳಿಕೊಂಡಿದ್ದಾರೆ.