ಹೈದರಾಬಾದ್: ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯದಿಂದ 84 ವರ್ಷದ ವೃದ್ಧರೊಬ್ಬರು ಲಾಕರ್ ಕೋಣೆಯಲ್ಲಿ 18 ಗಂಟೆ ಬಂಧಿಯಾದ ಘಟನೆ ನಡೆದಿದೆ.
ಬ್ಯಾಂಕ್ ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ಅವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಮರುದಿನ ಬೆಳಗ್ಗೆ ಪೊಲೀಸರು ವೃದ್ಧ ಹೋಗಿದ್ದ ಬ್ಯಾಂಕ್ ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಬ್ಯಾಂಕ್ ಲಾಕರ್ ಕೊಠಡಿಯಲ್ಲಿ ಬೀಗ ಹಾಕಿರುವುದು ಕಂಡುಬಂದಿದೆ. ಇದಕ್ಕೆ ಬ್ಯಾಂಕ್ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ.
ತೆಲಂಗಾಣದ ಹೈದರಾಬಾದ್ನ ಜುಬಿಲಿ ಹಿಲ್ಸ್ ನಲ್ಲಿರುವ ಯೂನಿಯನ್ ಬ್ಯಾಂಕ್ನಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ನ ಜೂಬಿಲಿ ಹಿಲ್ಸ್ ರಸ್ತೆ ನಂ.67 ನಿವಾಸಿ 84 ವರ್ಷದ ಕೃಷ್ಣಾರೆಡ್ಡಿ ಅವರು ಸೋಮವಾರ ಸಂಜೆ 4 ಗಂಟೆಗೆ ಲಾಕರ್ ರೂಂನಲ್ಲಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಬ್ಯಾಂಕ್ ಸಿಬ್ಬಂದಿ ಪರಿಶೀಲಿಸದೆ ಲಾಕರ್ ಕೊಠಡಿ ಮುಚ್ಚಿದ್ದರು. ಇದರಿಂದಾಗಿ ಅವರು ರಾತ್ರಿಯಿಡೀ ಲಾಕರ್ ಕೋಣೆಯಲ್ಲಿಯೇ ಇದ್ದರು.
ಮಂಗಳವಾರ ಬೆಳಗ್ಗೆ ಪೊಲೀಸರಿಗೆ ಅನುಮಾನ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಒಳಗೆ ಕೃಷ್ಣಾರೆಡ್ಡಿ ಪತ್ತೆಯಾಗಿದ್ದಾರೆ. ಮಧುಮೇಹ ಸಮಸ್ಯೆ ಇದ್ದ ಕಾರಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.