ಈ ವರ್ಷದ ಅತಿಯಾದ ಉಷ್ಣದಿಂದಾಗಿ ಎಲೆಕ್ಟ್ರಾನಿಕ್ ಸ್ಕೂಟರ್ಗಳು ಬೆಂಕಿಗೆ ಆಹುತಿಯಾಗುತ್ತಿರುವ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಓಲಾ ಹಾಗೂ ಓಕಿನೋವಾ ಬೈಕುಗಳಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಇದೀಗ ಪ್ಯೂರ್ ಇವಿ ಎಲೆಕ್ಟ್ರಿಕ್ ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡ ಘಟನೆಯು ವರದಿಯಾಗಿದೆ. ಚೆನ್ನೈ ಸಮೀಪದ ಮಂಜಂಪಕ್ಕಂ ಎಂಬಲ್ಲಿನ ಮಥುರಾ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದೆ.
ಬೆಂಕಿಯಿಂದ ಹೊತ್ತಿಕೊಂಡು ಉರಿಯುತ್ತಿರುವ ಬೈಕ್ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಉರಿಯುತ್ತಿರುವ ಬೈಕಿನಿಂದ ಕಪ್ಪು ಬಣ್ಣದ ಹೊಗೆಯು ಹೊರಬರುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋವನ್ನು ಸುಮಂತ್ ಬ್ಯಾನರ್ಜಿ ಎಂಬವರು ಟ್ಬಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವರ್ಷದಲ್ಲಿ ಬೆಂಕಿಗೆ ಆಹುತಿಯಾದ ನಾಲ್ಕನೇ ಇಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಒಲಾ ಎಸ್ 1 ಬೈಕ್ ಬೆಂಕಿಗೆ ಆಹುತಿಯಾಗಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಓಕಿನೋವಾ ಸ್ಕೂಟರ್ ಕೂಡ ಬೆಂಕಿಗೆ ಆಹುತಿಯಾಗಿತ್ತು. ದೇಶದಲ್ಲಿ ಹವಾಮಾನ ಪರಿಸ್ಥಿತಿಯೇ ಎಲೆಕ್ಟ್ರಿಕ್ ಸ್ಕೂಟರ್ಗಳು ಬೆಂಕಿಗೆ ಆಹುತಿಯಾಗಲು ಕಾರಣವಾಗಿದೆ. ಆದರೂ ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಸಂಬಂಧಪಟ್ಟ ಸ್ಕೂಟರ್ ಕಂಪನಿಗಳು ನಡೆಸುತ್ತಿವೆ.