ಕೊರೊನಾ ಕೊಂಚ ಕಡಿಮೆಯಾಗಿದೆ ಎಂದು ಇಡೀ ಜಗತ್ತೇ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಹೊಸ ವೈರಸ್ ಆರ್ಭಟ ಶುರುವಾಗಿದೆ. ನೈಜೀರಿಯಾದಲ್ಲಿ ಲಸ್ಸಾ ಎಂಬ ಜ್ವರ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ. ಈ ಹೊಸ ವೈರಸ್ ಜಗತ್ತಿಗೆ ಹೊಸ ಸವಾಲನ್ನೇ ಸೃಷ್ಟಿಸಬಹುದು ಅನ್ನೋ ಆತಂಕ ಶುರುವಾಗಿದೆ.
ನೈಜೀರಿಯಾದ ರೋಗ ನಿಯಂತ್ರಣ ಕೇಂದ್ರವೇ ನೀಡಿರುವ ಮಾಹಿತಿ ಪ್ರಕಾರ ಕಳೆದ 88 ದಿನಗಳಲ್ಲಿ 123 ಮಂದಿ ಲಸ್ಸಾ ಜ್ವರದಿಂದ ಮೃತಪಟ್ಟಿದ್ದಾರೆ. ಇದುವರೆಗೆ 659 ಜನರಲ್ಲಿ ಸೋಂಕು ದೃಢಪಟ್ಟಿದೆ. ಬ್ರಿಟನ್‌ನಲ್ಲಿ ಕೂಡ ಇಬ್ಬರಲ್ಲಿ ಲಸ್ಸಾ ವೈರಸ್ ಸೋಂಕು ಪತ್ತೆಯಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ.
ಇನ್ನೂ ಆಘಾತಕಾರಿ ಸಂಗತಿ ಎಂದರೆ ಲಸ್ಸಾ ಜ್ವರದಿಂದ ಗುಣಮುಖರಾಗಿ ಬಂದ ಶೇ.25 ರಷ್ಟು ರೋಗಿಗಳಿಗೆ ಕಿವಿ, ಕಿವುಡಾಗುತ್ತಿದೆ. ಈ ಪೈಕಿ ಅರ್ಧದಷ್ಟು ಮಂದಿ ಮೂರು ತಿಂಗಳಲ್ಲಿ ತಮ್ಮ ಶ್ರವಣ ಶಕ್ತಿಯನ್ನು ಮರಳಿ ಪಡೆಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಜ್ವರ ಲಸ್ಸಾ ವೈರಸ್‌ನಿಂದ ಉಂಟಾಗುವ ತೀವ್ರವಾದ ವೈರಲ್ ಹೆಮರಾಜಿಕ್ ಜ್ವರವಾಗಿದೆ. ಲಸ್ಸಾ, ಅರೆನಾವೈರಸ್ ಜಾತಿಗೇ ಸೇರಿದ್ದು.
ಆಫ್ರಿಕನ್ ಮಲ್ಟಿಮಾಮೇಟ್ ಇಲಿಗಳಿಂದ ಮನುಷ್ಯರಿಗೆ ಇದು ಹರಡುತ್ತದೆ. ಇಲಿಗಳ ಮೂತ್ರ ಮತ್ತು ಕೊಳೆ ತಗುಲಿದ ಗೃಹೋಪಯೋಗಿ ವಸ್ತುಗಳು ಅಥವಾ ಆಹಾರ ಪದಾರ್ಥಗಳ ಮೂಲಕ ಈ ರೋಗ ಹರಡುತ್ತದೆ.
ನೈಜೀರಿಯಾದಲ್ಲಿ ಲಸ್ಸಾ ಜ್ವರದ ಪ್ರತಾಪ
21 ರಿಂದ 30 ವರ್ಷ ವಯಸ್ಸಿನವರಲ್ಲಿ ಹೆಚ್ಚಿನ ಸೋಂಕು ತಗುಲಿದೆ.
2022ರಲ್ಲಿ 45 ಆರೋಗ್ಯ ಕಾರ್ಯಕರ್ತರೂ ಲಸ್ಸಾ ಜ್ವರದಿಂದ ಬಳಲಿದ್ದಾರೆ.
36 ರಾಜ್ಯಗಳ ಪೈಕಿ 23 ರಾಜ್ಯಗಳಲ್ಲಿ ಸೋಂಕು ದೃಢಪಟ್ಟಿದೆ.
ಜನವರಿ ಮತ್ತು ಮಾರ್ಚ್ ನಡುವೆ ಸಾವಿನ ಪ್ರಮಾಣ ಶೇ. 18.7ರಷ್ಟಿದೆ.
ಶೇ.80ರಷ್ಟು ರೋಗಿಗಳಲ್ಲಿ ಲಕ್ಷಣವೇ ಇರುವುದಿಲ್ಲ
WHO ಪ್ರಕಾರ, ಲಸ್ಸಾ ಜ್ವರದ ಸೋಂಕಿಗೆ ಒಳಗಾದ ಶೇ.80ರಷ್ಟು ಜನರಲ್ಲಿ ಯಾವುದೇ ಲಕ್ಷಣಗಳಿರುವುದಿಲ್ಲ. ಸೋಂಕಿತ ಐವರಲ್ಲಿ ಒಬ್ಬರಿಗೆ ತೀವ್ರ ನೋವು ಇರುತ್ತದೆ. ಯಕೃತ್ತು, ಗುಲ್ಮ ಮತ್ತು ಮೂತ್ರಪಿಂಡಗಳು ವೈರಸ್‌ನಿಂದ ಕೆಟ್ಟದಾಗಿ ಪ್ರಭಾವಿತವಾಗಿವೆ ಎಂಬುದಕ್ಕೆ ಪುರಾವೆಗಳು ಕಂಡುಬಂದಿವೆ. ಅಂಗಾಂಗಗಳ ವೈಫಲ್ಯದಿಂದ ಜ್ವರಪೀಡಿತರು ಸಾವನ್ನಪ್ಪುತ್ತಿದ್ದಾರೆ. ಮಾನವರ ಮೇಲೆ ಲಸ್ಸಾ ಜ್ವರದ ಪರಿಣಾಮವು ಎರಡರಿಂದ 21 ದಿನಗಳವರೆಗೆ ಇರುತ್ತದೆ.
ಲಸ್ಸಾ ಎಂಬ ಹೆಸರು ಬಂದಿದ್ಹೇಗೆ…?
ಅಮೆರಿಕದ ಆರೋಗ್ಯ ಇಲಾಖೆ ಪ್ರಕಾರ ಈ ರೋಗ 1969ರಲ್ಲಿ ಮೊದಲು ನೈಜೀರಿಯಾದ ಲಾಸಾ ನಗರದಲ್ಲಿ ಪತ್ತೆಯಾಗಿತ್ತು. ಹಾಗಾಗಿ ಅದಕ್ಕೆ ಲಸ್ಸಾ ಎಂದು ಹೆಸರಿಡಲಾಗಿದೆ. ಪ್ರತಿ ವರ್ಷ ಸುಮಾರು 5 ಸಾವಿರ ಜನರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ನೈಜೀರಿಯಾದ ಬೆನಿನ್, ಘಾನಾ, ಮಾಲಿ, ಸಿಯೆರಾ ಲಿಯೋನ್ ನಲ್ಲಿ ಈ ಕಾಯಿಲೆ ಹೆಚ್ಚಾಗಿದೆ.
ಕೊರೊನಾದಂತೆಯೇ ಇದೆ ಲಸ್ಸಾ ಸೋಂಕಿನ ಲಕ್ಷಣಗಳು
WHO ಪ್ರಕಾರ, ಲಸ್ಸಾ ವೈರಸ್ ತಗುಲಿದ ವ್ಯಕ್ತಿ ತೀವ್ರ ಜ್ವರ, ತಲೆನೋವು, ಗಂಟಲು ನೋವು, ಸ್ನಾಯು ನೋವು, ಎದೆ ನೋವು, ಅತಿಸಾರ, ಕೆಮ್ಮು, ಹೊಟ್ಟೆ ನೋವು ಮತ್ತು ವಾಕರಿಕೆಯಿಂದ ಬಳಲುತ್ತಾನೆ. ರೋಗ ತೀವ್ರವಾಗಿರುವವರಲ್ಲಿ ಮುಖದ ಊತ, ಶ್ವಾಸಕೋಶದಲ್ಲಿ ನೀರು, ಬಾಯಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ. ರೋಗಿಯ ರಕ್ತದೊತ್ತಡವೂ ವೇಗವಾಗಿ ಕುಸಿಯುತ್ತದೆ.
ನೈಜೀರಿಯಾದಲ್ಲಿ ಇದುವರೆಗೆ 2,55,341 ಕರೋನಾ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಸೋಂಕಿನಿಂದ 3142 ರೋಗಿಗಳು ಸಾವನ್ನಪ್ಪಿದ್ದಾರೆ. 2.49 ಲಕ್ಷಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿದ್ದಾರೆ. ಈಗ ಆತಂಕ ಮೂಡಿಸಿರೋ ಲಸ್ಸಾ ಕೂಡ ಕೊರೊನಾದಂತೆಯೇ ತೀವ್ರವಾಗಿ ಹರಡಿದ್ರೆ ಇಡೀ ವಿಶ್ವಕ್ಕೇ ಸಂಕಟ ಎದುರಾಗಬಹುದು.