ಮಧ್ಯಪ್ರದೇಶದ ಮಂಡ್ಸೌರ್ ಎಂಬಲ್ಲಿ ಕೋಮು ಸೌಹಾರ್ದತೆಗೆ ಅತ್ಯುತ್ತಮ ನಿದರ್ಶನವೊಂದಿದೆ. ಮುಸ್ಲಿಂ ಮೇಸ್ತ್ರಿ ನಹ್ರು ಖಾನ್ ಎಂಬುವವರು ಪಶುಪತಿನಾಥ ದೇವಾಲಯದ ಆವರಣದಲ್ಲಿ 3,700 ಕೆಜಿ ತೂಕದ ಬೃಹತ್ ಘಂಟೆಯನ್ನು ಪ್ರತಿಷ್ಠಾಪಿಸಿದ್ದಾರೆ.
ಈ ಮಹಾಘಂಟೆಯನ್ನು ಬಹಳ ಸಮಯದಿಂದ ದೇವಾಲಯದ ಆವರಣದಲ್ಲೇ ಇಡಲಾಗಿತ್ತು. ಭಾರೀ ತೂಕವಿದ್ದಿದ್ದರಿಂದ ಅದನ್ನು ಅಳವಡಿಸಲು ಸಾಧ್ಯವಿಲ್ಲವೆಂದು ಹಾಗೆಯೇ ಇಡಲಾಗಿತ್ತು. ಎಷ್ಟೋ ಎಂಜಿನಿಯರ್ ಗಳು ಬಂದರೂ ಅವರ್ಯಾರೂ ಈ ಘಂಟೆಯನ್ನು ನೇತುಹಾಕುವ ಧೈರ್ಯ ಮಾಡಿರಲಿಲ್ಲ.
ಬಹಳ ಸಮಯದಿಂದ ಹಾಗೇ ಇದ್ದ ಈ ಮಹಾಘಂಟೆಯನ್ನು ನಹ್ರು ಖಾನ್ ದೇವಾಲಯದ ಆವರಣದಲ್ಲಿ ತೂಗು ಹಾಕಿದ್ದಾರೆ. ಈ ಪ್ರಯಾಸಕರ ಕೆಲಸಕ್ಕೆ ಅವರು ಹಣವನ್ನೇ ಪಡೆದಿಲ್ಲ. ಮಹಾಘಳಿಗೆಯಲ್ಲಿಯೇ ಘಂಟೆಯನ್ನು ಪ್ರತಿಷ್ಠಾಪಿಸಿದ್ದಾರೆ. ನಹ್ರು ಖಾನ್ ಹಲವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಈ ಹಿಂದೆಯೂ ತೊಡಗಿಕೊಂಡಿದ್ದಾರೆ.
ಇದೀಗ ಹಿಂದು ದೇವಾಲಯದಲ್ಲಿ ಘಂಟೆ ಅಳವಡಿಸಿರೋ ಅವರ ಕಾರ್ಯದ ಬಗ್ಗೆ ಅಲ್ಲಿನ ಶಾಸಕ ಯಶಪಾಲ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 3700 ಕೆಜಿ ತೂಕದ ಘಂಟೆಯನ್ನು ನೇತು ಹಾಕುವುದು ಸುಲಭದ ಕೆಲಸವಾಗಿರಲಿಲ್ಲ. ನಹ್ರು ಖಾನ್ ಅವರು ಸತತ 15 ದಿನಗಳ ಕಾಲ ಶ್ರಮಿಸಿ ಘಂಟೆಯನ್ನು ಸುರಕ್ಷಿತವಾಗಿ ಪ್ರತಿಷ್ಠಾಪಿಸಿದ್ದಾರೆ.