ಬೆಂಗಳೂರು: ಜೂನ್ ಒಳಗೆ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಜೂನ್ ತಿಂಗಳ ಒಳಗೆ ಬಾಕಿ ಇರುವ 4.25 ಲಕ್ಷ ಅರ್ಜಿಗಳು ಮತ್ತು ಹೊಸದಾಗಿ ಸಲ್ಲಿಕೆಯಾದ 4 ಲಕ್ಷಕ್ಕೂ ಅಧಿಕ ಅರ್ಜಿಗಳಿಗೆ ಬಿಪಿಎಲ್ ಕಾರ್ಡುಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಕೊರೋನಾ ಅವಧಿಯಲ್ಲಿ ಹೊಸ ಪಡಿತರ ಚೀಟಿ ಕೋರಿ ಸಲ್ಲಿಕೆಯಾದ ಅರ್ಜಿದಾರರ ಸ್ಥಳ ಪರಿಶೀಲನೆ ಕಾರ್ಯ ವಿಳಂಬವಾಗಿದೆ. ಪರಿಶೀಲನೆ ಆದ ಅರ್ಜಿಗಳಿಗೆ ತಿಂಗಳೊಳಗೆ ರೇಷನ್ ಕಾರ್ಡ್ ನೀಡಲಾಗುವುದು ಎಂದರು.
ಕೊರೋನಾ ಅವಧಿಯಲ್ಲಿ ಬಯೋಮೆಟ್ರಿಕ್ ಬಳಕೆ ಹಿಂಪಡೆಯಲಾಗಿತ್ತು. ಈಗ ಪಡಿತರ ಚೀಟಿ ನೀಡುವ ಕಾರ್ಯ ಆರಂಭವಾಗಿದ್ದು, ಅರ್ಜಿಗಳ ಹಿರಿತನದ ಆಧಾರದ ಮೇಲೆ ಕಾರ್ಡ್ ಗಳನ್ನು ನೀಡಲಾಗುತ್ತಿದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ಶ್ರೀಮಂತರು ಪಡೆದುಕೊಂಡಿದ್ದ ಸುಮಾರು ಮೂರು ಲಕ್ಷ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.