ಕೋಝಿಕೋಡ್: ಸಮುದ್ರದ ಅಲೆಗಳ ಮೇಲೆ ನಡೆಯುವುದು ಅಸಾಧ್ಯವಾದ ಮಾತು. ಆದರೀಗ ಅಸಾಧ್ಯವನ್ನು ಇಲ್ಲಿ ಸಾಧಿಸಿ ತೋರಿಸಲಾಗಿದೆ. ಕೇರಳದ ಕೋಝಿಕೋಡ್ ಬೀಚ್ನಲ್ಲಿ ಹೊಸದಾಗಿ ತೇಲುವ ಸೇತುವೆಯನ್ನು ನಿರ್ಮಿಸಲಾಗಿದೆ.
ಕೋಝಿಕ್ಕೋಡ್ನ ಬೇಪೋರ್ ಬೀಚ್ನಲ್ಲಿ ಜನರು ಅಲೆಗಳ ನಡುವೆ ಸರಾಗವಾಗಿ ತೇಲುತ್ತಿರುವ ನವೀನ ಸೇತುವೆಯನ್ನು ಆನಂದಿಸುತ್ತಿದ್ದಾರೆ. ಈ ವಿಡಿಯೋವನ್ನು ಎಎನ್ಐ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ಕಾಮೆಂಟ್ಗಳನ್ನು ಸಂಗ್ರಹಿಸಿದೆ.
ಮಾರ್ಚ್ 31 ರಂದು ಕೇರಳದ ಲೋಕೋಪಯೋಗಿ ಸಚಿವ ಪಿ.ಎ. ಮೊಹಮ್ಮದ್ ರಿಯಾಜ್ ಅವರು ಸೇತುವೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಸಾರ್ವಜನಿಕರಿಗೆ ಮುಕ್ತವಾಗಿರುವ ಸೇತುವೆಯು ದೇಶಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಈ ಸೇತುವೆಯಲ್ಲಿ ಏಕಕಾಲಕ್ಕೆ 500 ಮಂದಿ ನಿಲ್ಲಬಹುದು ಎಂದು ವರದಿ ತಿಳಿಸಿದೆ. ಆದರೆ, ಸದ್ಯಕ್ಕೆ 50 ಜನರಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುವುದು ಹಾಗೂ ಜನರು ಲೈಫ್ ಜಾಕೆಟ್ಗಳನ್ನು ಧರಿಸಬೇಕಾಗುತ್ತದೆ. ಸೇತುವೆಯ ಕೊನೆಯಲ್ಲಿ, 15 ಮೀಟರ್ ಅಗಲದ ವೇದಿಕೆಯು ಜನರಿಗೆ ಸಮುದ್ರದ ಸುಂದರವಾದ ನೋಟವನ್ನು ನೀಡುತ್ತದೆ.
ಈ ತೇಲುವ ಸೇತುವೆಯು 100 ಮೀಟರ್ ಉದ್ದ ಮತ್ತು ಮೂರು ಮೀಟರ್ ನಷ್ಟು ಅಗಲವಿದೆ. ಇದನ್ನು ಸುಲಭವಾಗಿ ಬೇರೆಡೆ ಕೂಡ ಸ್ಥಳಾಂತರಿಸಬಹುದಾಗಿದೆ. ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ ನಿಂದ ಈ ತೇಲುವ ಸೇತುವೆ ಮಾಡಲ್ಪಟ್ಟಿದೆ.
ಇನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಅಂಡಮಾನ್ ದ್ವೀಪದಲ್ಲಿ ಈಗಾಗಲೇ ತೇಲುವ ಸೇತುವೆಯನ್ನು ಹೊಂದಿದೆ ಅಂತಾ ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.