ಬಹ್ರೇನ್: ಹಿಜಾಬ್ ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ ಆರೋಪದ ಮೇಲೆ ಬಹ್ರೇನ್ನ ಅದ್ಲಿಯಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಅನ್ನು ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.
ಬಹ್ರೇನ್ನ ರಾಜಧಾನಿ ಮನಾಮಾದ ಅಡ್ಲಿಯಾದಲ್ಲಿರುವ ಲ್ಯಾಂಟರ್ನ್ಸ್ ರೆಸ್ಟೋರೆಂಟ್ನಲ್ಲಿ ಈ ಘಟನೆ ಸಂಭವಿಸಿದೆ. ಹಿಜಾಬ್ ಧರಿಸಿದ ಮಹಿಳೆಯನ್ನು ರೆಸ್ಟೋರೆಂಟ್ ಸಿಬ್ಬಂದಿ ತಡೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಭಾರತೀಯ ಮೂಲದ ಡ್ಯೂಟಿ ಮ್ಯಾನೇಜರ್ ಹಿಜಾಬ್ ಧರಿಸಿ ರೆಸ್ಟೋರೆಂಟ್ಗೆ ಬಂದ ಮಹಿಳೆಗೆ ಪ್ರವೇಶ ನಿರಾಕರಿಸಿದ್ದಾರೆ.
ಈ ವಿಡಿಯೋವನ್ನು ಮಹಿಳೆಯ ಸ್ನೇಹಿತೆ ಮರಿಯಮ್ ನಾಜಿ ಎಂಬುವವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನ ಪ್ರಾಧಿಕಾರ (ಬಿಟಿಇಎ) ಈ ಸಮಸ್ಯೆಯ ಕುರಿತು ತನಿಖೆ ನಡೆಸಿದೆ. ಜನರ ವಿರುದ್ಧ ತಾರತಮ್ಯ ಮಾಡುವ ಎಲ್ಲಾ ಕ್ರಮಗಳನ್ನು ತಿರಸ್ಕರಿಸುವುದಾಗಿ ಹೇಳಿದ ಪ್ರಾಧಿಕಾರ, ರೆಸ್ಟೋರೆಂಟ್ ಗೆ ಬೀಗ ಜಡಿದಿದೆ.
ಮಹಿಳೆ ರೆಸ್ಟೋರೆಂಟ್ ಪ್ರವೇಶಿಸುವುದನ್ನು ನಿರ್ಬಂಧಿಸಿದ ಆರೋಪದ ಮೇಲೆ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ ಎಂದು ಲ್ಯಾಂಟರ್ನ್ಸ್ ರೆಸ್ಟೋರೆಂಟ್ ತಿಳಿಸಿದೆ. ಈ ಸಂಬಂಧ ರೆಸ್ಟೋರೆಂಟ್ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಹೇಳಿಕೆಯನ್ನು ಸಹ ಪ್ರಕಟಿಸಿದೆ. ಬಹ್ರೇನ್ನಲ್ಲಿ 35 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದು, ಇಲ್ಲಿ ಪ್ರತಿಯೊಬ್ಬರು ಭೇಟಿ ನೀಡಲು ಮುಕ್ತ ಅವಕಾಶವಿದೆ ಎಂದು ರೆಸ್ಟೋರೆಂಟ್ ಸ್ಪಷ್ಟಪಡಿಸಿದೆ.
https://twitter.com/first78/status/1507405460646895623?ref_src=twsrc%5Etfw%7Ctwcamp%5Etweetembed%7Ctwterm%5E1507405460646895623%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-news-indian-restaurant-in-bahrain-shut-down-for-refusing-entry-to-woman-wearing-hijab-5307261%2F