ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್ ನ ಜನರಿಗೆ ಮನೆ ಬಾಗಿಲಿಗೆ ಪಡಿತರ ವಿತರಣೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ನಮ್ಮ ಅಧಿಕಾರಿಗಳು ಸಮಯವನ್ನು ಕೇಳಲು ನಿಮಗೆ ಕರೆ ಮಾಡುತ್ತಾರೆ. ತಿಳಿಸಿದ ಸಮಯದಲ್ಲಿ ಪಡಿತರವನ್ನು ತಲುಪಿಸುತ್ತಾರೆ ಎಂದು ಮಾನ್ ಹೇಳಿದರು.
ಯೋಜನೆಯು ಐಚ್ಛಿಕವಾಗಿದೆ ಮತ್ತು ಪಡಿತರ ಚೀಟಿದಾರರು ಇದರಿಂದ ಹೊರಗುಳಿಯಬಹುದು. ವಿತರಿಸಲಾಗುವ ಪಡಿತರವು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಅದನ್ನು ಶುದ್ಧ ಪ್ಯಾಕೇಜ್ ಗಳಲ್ಲಿಯೂ ತಲುಪಿಸಲಾಗುತ್ತದೆ ಎಂದು ಅವರು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರು, ಜನಸಾಮಾನ್ಯರು ತಮ್ಮ ಪಾಲಿನ ಪಡಿತರ ಪಡೆಯಲು ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಕಂಡು ಬರುತ್ತಿದೆ. ಕೆಲವೊಮ್ಮೆ, ಬಡವರು ತಮ್ಮ ಪಾಲಿನ ಪಡಿತರಕ್ಕಾಗಿ ಸರದಿಯಲ್ಲಿ ನಿಲ್ಲಲು ತಮ್ಮ ದೈನಂದಿನ ಕೂಲಿಯನ್ನು ಸಹ ಬಿಡಬೇಕಾಗುತ್ತದೆ. ಕೆಲವು ವಯಸ್ಸಾದ ಮಹಿಳೆಯರು ಪಡಿತರ ಪಡೆಯಲು ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗಬೇಕಾಗಿದೆ ಎಂದರು.
ಪಡಿತರವನ್ನು ಬಾಗಿಲಿಗೆ ತಲುಪಿಸುವುದು ಎಎಪಿಯ ಚುನಾವಣೆಯಲ್ಲಿ ಪ್ರಮುಖ ಪ್ರಚಾರ ಕಾರ್ಯಸೂಚಿಯಾಗಿತ್ತು ಎಂದರು.