ಸುಕನ್ಯ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಖಾತೆ ಹೊಂದಿರುವವರಿಗೆ ಅತ್ಯಂತ ಮಹತ್ವದ ಸೂಚನೆ ಇದೆ. ಈ ಮೂರು ತೆರಿಗೆ ಉಳಿತಾಯ ಯೋಜನೆ ಅಡಿ ನಿಮ್ಮ ಖಾತೆಗಳು ಸಕ್ರಿಯವಾಗಿ ಇರಬೇಕೆಂದರೆ ಖಾತೆದಾರರು ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದರೆ ಮಾರ್ಚ್ 31ರೊಳಗೆ ಕನಿಷ್ಠ ಮೊತ್ತವನ್ನು ಠೇವಣಿ ಇಡಬೇಕು. ಈ ಮೂಲಕ ನಿಮ್ಮ ಖಾತೆಗಳ ಬ್ಯಾಲೆನ್ಸ್ ಅನ್ನು ನವೀಕರಿಸಲೇಬೇಕು.
ನಿಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇದೆಯೋ ಇಲ್ಲವೋ ಅನ್ನೋದನ್ನು ಇವತ್ತೇ ಪರಿಶೀಲಿಸಿ. ಮಾರ್ಚ್ 31ರೊಳಗೆ ಹಣವನ್ನು ಠೇವಣಿ ಇಡದೇ ಇದ್ದಲ್ಲಿ ನೀವು ದಂಡವನ್ನು ಪಾವತಿಸಬೇಕಾಗಬಹುದು. ಅಥವಾ ನಿಮ್ಮ ಖಾತೆ ನಿಷ್ಕ್ರಿಯಗೊಳ್ಳುವ ಸಾಧ್ಯತೆಯೂ ಇರುತ್ತದೆ. ಒಮ್ಮೆ ಈ ಖಾತೆಗಳನ್ನು ನಿಷ್ಕ್ರಿಯಗೊಳಿಸಿದರೆ, ಅವುಗಳನ್ನು ಮತ್ತೆ ಸಕ್ರಿಯಗೊಳಿಸಲು ನೀವು ದಂಡವನ್ನು ಪಾವತಿಸಬೇಕಾಗುತ್ತದೆ.
ಪಿಎಫ್ ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ 500 ರೂಪಾಯಿ ಠೇವಣಿ ಇಡಲೇಬೇಕು. ಹಣ ಹಾಕಲು ಕೊನೆಯ ದಿನಾಂಕ ಇದೇ ತಿಂಗಳ 31. ನೀವು ಈವರೆಗೆ ಹಣವನ್ನು ಠೇವಣಿ ಮಾಡದಿದ್ದರೆ, ಶೀಘ್ರದಲ್ಲೇ ಮಾಡಿ. ಇಲ್ಲದಿದ್ದರೆ ನೀವು ಪ್ರತಿ ವರ್ಷಕ್ಕೆ 500 ರೂಪಾಯಿಗಳ ಬಾಕಿ ಚಂದಾದಾರಿಕೆಯೊಂದಿಗೆ ಪ್ರತಿ ವರ್ಷ 50 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಖಾತೆಯನ್ನು ಬಂದ್ ಮಾಡಿದರೆ ನಿಮಗೆ ಯಾವುದೇ ಸಾಲ ಸೌಲಭ್ಯ ಸಿಗುವುದಿಲ್ಲ.
ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಖಾತೆ ಹೊಂದಿರುವವರು ವಾರ್ಷಿಕ ಕನಿಷ್ಠ 1000 ರೂಪಾಯಿಯನ್ನು ಠೇವಣಿ ಇಡುವುದು ಕಡ್ಡಾಯ. ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ರೆ ಖಾತೆ ನಿಷ್ಕ್ರಿಯವಾಗುತ್ತದೆ. ಜೊತೆಗೆ ನೀವು 100 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಖಾತೆ ಬಂದ್ ಆಗುವ ಅಪಾಯವಿರುತ್ತದೆ.
ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಕನಿಷ್ಠ 250 ರೂಪಾಯಿ ಠೇವಣಿ ಇಡುವುದು ಕಡ್ಡಾಯ. ಇಲ್ಲದಿದ್ದರೆ ಇದಕ್ಕಾಗಿ ನೀವು 50 ರೂಪಾಯಿ ದಂಡ ತೆರಬೇಕು. ಸುಕನ್ಯ ಸಮೃದ್ಧಿ ಖಾತೆಯನ್ನು ತೆರೆದ ದಿನಾಂಕದಿಂದ 15 ವರ್ಷಗಳು ಪೂರ್ಣಗೊಳ್ಳುವ ಮೊದಲೇ ಡೀಫಾಲ್ಟ್ ಖಾತೆಯನ್ನು ಕ್ರಮಬದ್ಧಗೊಳಿಸಬಹುದು. ಹಾಗಾಗಿ ಖಾತೆಯಲ್ಲಿ ಕನಿಷ್ಠ ಮೊತ್ತ ಇದೆಯೋ ಇಲ್ಲವೋ ಎಂಬುದನ್ನು ಇಂದೇ ಪರಿಶೀಲಿಸಿ.