ಭಾರತ-ಪಾಕಿಸ್ತಾನ ವಿಭಜನೆಯಿಂದ 74 ವರ್ಷಗಳ ಹಿಂದೆ ಬೇರ್ಪಟ್ಟ ಸಹೋದರರು ಮತ್ತೆ ಒಂದಾದ ಹೃದಯಸ್ಪರ್ಶಿ ಘಟನೆ ಕರ್ತಾರ್‌ಪುರ ಕಾರಿಡಾರ್ ಸಾಕ್ಷಿಯಾಗಿತ್ತು.
ಹೌದು, ಬರೋಬ್ಬರಿ 74 ವರ್ಷಗಳ ಹಿಂದೆ ಪರಸ್ಪರ ಬೇರ್ಪಟ್ಟ ಇಬ್ಬರು ಸಹೋದರರು ಮತ್ತೆ ಒಂದಾಗಿದ್ದರು. ಇದೀಗ ಸಿಕ್ಕಾ ಖಾನ್ ಹಬೀಬ್ ತನ್ನ ಸಹೋದರ ಮೊಹಮ್ಮದ್ ಸಿದ್ದಿಕ್ ಮತ್ತವರ ಕುಟುಂಬದವರನ್ನು ಭೇಟಿ ಮಾಡಲು ಶನಿವಾರ ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದರು.
1947ರ ವಿಭಜನೆಯಿಂದಾಗಿ ಸಿಕ್ಕಾ ಖಾನ್‌ರು ಅವರ ತಾಯಿಯೊಂದಿಗೆ ಭಾರತಕ್ಕೆ ಬಂದ್ರೆ, ಅವರ ಹಿರಿಯ ಸಹೋದರ ಸಿದ್ದಿಕ್ ಪಾಕಿಸ್ತಾನದಲ್ಲಿ ತಮ್ಮ ತಂದೆಯೊಂದಿಗೆ ಉಳಿಯುವಂತಾಯ್ತು. ಮತ್ತೆ ಎಂದಿಗೂ ಒಟ್ಟಿಗೆ ಇರಲು ಸಾಧ್ಯವಾಗಿಲ್ಲ.
ಆದರೆ, ಈ ವರ್ಷದ ಜನವರಿಯಲ್ಲಿ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಸಹೋದರರು ಮೊದಲ ಬಾರಿಗೆ ಭೇಟಿಯಾಗಿದ್ದರು. ಅವರ ಭಾವನಾತ್ಮಕ ಪುನರ್ಮಿಲನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣಲ್ಲೂ ಆನಂದಭಾಷ್ಪ ಹರಿದಿತ್ತು. ಇವರಿಬ್ಬರೂ ತಮ್ಮ ಪುನರ್ಮಿಲನಕ್ಕೆ ಮುನ್ನ ಪರಸ್ಪರ ವಿಡಿಯೋ ಕರೆ ಮುಖಾಂತರ ಮಾತನಾಡುತ್ತಿದ್ದರು.
ಸಿಕ್ಕಾ ಖಾನ್‌ಗೆ ಪಾಕಿಸ್ತಾನದಲ್ಲಿರುವ ತನ್ನ ಸಹೋದರ ಹಾಗೂ ಅವರ ಕುಟುಂಬವನ್ನು ಭೇಟಿ ಮಾಡಲು ಮೂರು ತಿಂಗಳ ಕಾಲ ವೀಸಾ ನೀಡಲಾಗಿದೆ. ಶನಿವಾರ ಸಂಜೆ ಇಬ್ಬರು ಸಹೋದರರು ಮತ್ತೆ ಭೇಟಿಯಾಗಿದ್ದಾರೆ. ಸಿದ್ದಿಕ್ ಮತ್ತು ಅವರ ಮಕ್ಕಳಿಗೆ ಸಿಕ್ಕಾ ಖಾನ್ ಉಡುಗೊರೆಗಳನ್ನು ಖರೀದಿಸಿದ್ದಾರಂತೆ. ಇನ್ನು ವೀಸಾ ಕೊಟ್ಟಿದ್ದಕ್ಕೆ ಅವರು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
VIDEO