ಇಸ್ಲಾಮಾಬಾದ್ ನಲ್ಲಿ ಭಾನುವಾರದ ರ್ಯಾಲಿಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ಪ್ರಧಾನಿ ಕಚೇರಿಯ ಯೂಟ್ಯೂಬ್ ಚಾನೆಲ್ ಮರುನಾಮಕರಣ ಮಾಡಿರುವುದು ಭಾನುವಾರ ಇಸ್ಲಾಮಾಬಾದ್ ನಲ್ಲಿ ಕರೆದ ಸಾರ್ವಜನಿಕ ರ್ಯಾಲಿಯಲ್ಲಿ ಇಮ್ರಾನ್ ಖಾನ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬಹುದು ಎಂಬ ಊಹಾಪೋಹವನ್ನು ಹುಟ್ಟುಹಾಕಿದೆ.
ರ್ಯಾಲಿಯು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ನ ಶಕ್ತಿ ಪ್ರದರ್ಶನವಾಗಿದೆ, ಪ್ರತಿಪಕ್ಷಗಳು ಅವರ ಸರ್ಕಾರವನ್ನು ಪದಚ್ಯುತಗೊಳಿಸಲು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತಕ್ಕೆ ಸಜ್ಜಾಗಿವೆ. ಇಮ್ರಾನ್ ಖಾನ್ ಅವರ ಸರ್ಕಾರವು ಪ್ರತಿಪಕ್ಷಗಳಿಂದ ಹೊರಿಸಲಾದ ಭ್ರಷ್ಟಾಚಾರ ಆರೋಪಗಳ ನಡುವೆ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದೆ.
ಶನಿವಾರದಂದು ಯೂಟ್ಯೂಬ್ ಚಾನೆಲ್ನ ಹೆಸರು ಬದಲಾವಣೆ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಚಾನೆಲ್ ಅನ್ನು ಪ್ರಧಾನ ಮಂತ್ರಿ ಕಚೇರಿ ಬದಲಿಗೆ ‘ಇಮ್ರಾನ್ ಖಾನ್’ ಎಂದು ಮರುನಾಮಕರಣ ಮಾಡಲಾಗಿದೆ.
ಇಮ್ರಾನ್ ಖಾನ್ ಮಾರ್ಚ್ 27 ರಂದು ಇಸ್ಲಾಮಾಬಾದ್ ನ ಪರೇಡ್ ಮೈದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಕರೆ ನೀಡಿದ್ದಾರೆ. ಅಲ್ಲಿ ಅವರು ರಾಜೀನಾಮೆ ಬಗ್ಗೆ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.