ವಿದೇಶ ಪ್ರಯಾಣ ಮಾಡುವವರಿಗೆ ಮಹತ್ವದ ಸುದ್ದಿಯಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಅಮಾನತು ಎರಡು ವರ್ಷಗಳ ಬಳಿಕ ಕೊನೆಗೊಳ್ಳಲಿದೆ. ನಾಳೆ ಅಂದರೆ ಮಾರ್ಚ್ 27 ರಿಂದ ಭಾರತದಿಂದ ಹೊರಡುವ ಮತ್ತು ಭಾರತಕ್ಕೆ ಬರುವ ನಿಗದಿತ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳು ಪುನರಾರಂಭಗೊಳ್ಳಲಿವೆ.
ಈ ಕುರಿತು ವಿಮಾನಯಾನ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಜನವರಿ 19 ರಂದು, ಈ ವಿಮಾನಗಳ ಅಮಾನತನ್ನು ಫೆಬ್ರವರಿ 28ರವರೆಗೆ ವಿಸ್ತರಿಸಲಾಯಿತು. ಕೊರೊನಾ ಸೋಂಕು ಕಡಿಮೆಯಾಗಿರುವುದರಿಂದ ಈಗ ಮಾರ್ಗಸೂಚಿಗಳನ್ನೂ ಬದಲಾಯಿಸಲಾಗಿದೆ.
ಭಾರತೀಯ ವಿಮಾನಯಾನ ಪ್ರಾಧಿಕಾರವು ಅಂತರಾಷ್ಟ್ರೀಯ ವಿಮಾನಗಳ ಮಾರ್ಗಸೂಚಿಗಳಲ್ಲಿ ತಿದ್ದುಪಡಿ ಮಾಡಿದೆ. ಪ್ರಯಾಣಿಕರು ಮತ್ತು ಉದ್ಯೋಗಿಗಳು ಅನೇಕ ನಿರ್ಬಂಧಗಳಿಂದ ಮುಕ್ತರಾಗಲಿದ್ದಾರೆ. ಆದ್ರೆ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.
ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ವಿಮಾನಗಳಲ್ಲಿ ಸಾಮಾಜಿಕ ಅಂತರಕ್ಕಾಗಿ ಮೂರು ಸೀಟುಗಳನ್ನು ಖಾಲಿ ಬಿಡಲಾಗುವುದಿಲ್ಲ. ವಿಮಾನ ಸಿಬ್ಬಂದಿ ಪಿಪಿಇ ಕಿಟ್ ಗಳನ್ನು ಧರಿಸಬೇಕಾಗಿಲ್ಲ. ಹಾಗಾಗಿ ಪ್ರಯಾಣಿಕರನ್ನು ತಪಾಸಣೆ ಮಾಡುವುದು ಭದ್ರತಾ ಸಿಬ್ಬಂದಿಗೆ ಸುಲಭವಾಗುತ್ತದೆ.
ಕೊರೊನಾ ಸೋಂಕಿನಿಂದಾಗಿ ಭಾರತದಲ್ಲಿ 2 ವರ್ಷಗಳಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟವೇ ಬಂದ್ ಆಗಿತ್ತು. 2020ರ ಮಾರ್ಚ್ 23ರಿಂದ ವಿಮಾನಗಳ ಹಾರಾಟವಿರಲಿಲ್ಲ. ಏರ್ ಬಬಲ್ ವ್ಯವಸ್ಥೆಯಲ್ಲಿ ಸುಮಾರು 45 ದೇಶಗಳ ನಡುವೆ ವಿಶೇಷ ವಿಮಾನಗಳು ಮಾತ್ರ ಪ್ರಯಾಣಿಸುತ್ತಿದ್ವು. ಈಗ ಎಲ್ಲಾ ವಿಮಾನಗಳ ಹಾರಾಟಕ್ಕೆ ಅನುಮತಿ ಸಿಕ್ಕಿರೋದು ಪ್ರಯಾಣಿಕರಿಗೆ ಖುಷಿ ತಂದಿದೆ.