ಖಾಸಗಿ ಶಾಲೆಗಳು, ಎನ್ ಜಿ ಓ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 21 ಹೊಸ ಸೈನಿಕ ಶಾಲೆಗಳನ್ನು ತೆರೆಯಲು ರಕ್ಷಣಾ ಸಚಿವಾಲಯ ಸಮ್ಮತಿ ನೀಡಿದೆ.
ದೇಶಾದ್ಯಂತ ಒಟ್ಟಾರೆ 100 ಸೈನಿಕ ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆರಂಭಿಕ ಹಂತದಲ್ಲಿ 21 ಶಾಲೆಗಳನ್ನು ಆರಂಭಿಸಲಾಗ್ತಿದೆ.
ಈಗಾಗ್ಲೇ ಇರುವ ಸೈನಿಕ ಶಾಲೆಗಳಿಗಿಂತಲೂ ಇವು ವಿಶಿಷ್ಟವಾಗಿರಲಿವೆ. ವಿದ್ಯಾರ್ಥಿಗಳಿಗೆ, ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣ ಒದಗಿಸುವುದು, ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳ್ಳಲು ಪ್ರೋತ್ಸಾಹಿಸುವುದು ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಪ್ರಧಾನಿ ಮೋದಿ 100 ಹೊಸ ಸೈನಿಕ ಶಾಲೆಗಳನ್ನು ತೆರೆಯಲು ಮುಂದಾಗಿದ್ದಾರೆ ಅಂತಾ ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.
ಇಂದಿನ ಯುವಕರನ್ನು ನಾಳಿನ ಜವಾಬ್ದಾರಿಯುತ ಪ್ರಜೆಗಳಾಗಿ ಪರಿವರ್ತಿಸುವ ಮೂಲಕ ರಾಷ್ಟ್ರ ನಿರ್ಮಾಣದ ಕಡೆಗೆ ಸರ್ಕಾರದ ಜೊತೆ ಕೈಜೋಡಿಸಿ ಕೆಲಸ ಮಾಡಲು ಖಾಸಗಿ ವಲಯಕ್ಕೂ ಇದು ಅವಕಾಶವನ್ನು ಕಲ್ಪಿಸಿದೆ. ಸೈನಿಕ್ ಸ್ಕೂಲ್ಸ್ ಸೊಸೈಟಿಯ ಅಧೀನದಲ್ಲಿ ಇವು ಕಾರ್ಯನಿರ್ವಹಿಸುತ್ತವೆ. ಸಮಾಜವು ಸೂಚಿಸಿದ ಪಾಲುದಾರಿಕೆಯ ಕ್ರಮದಲ್ಲಿ ಹೊಸ ಸೈನಿಕ ಶಾಲೆಗಳು ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸಬೇಕು.