ಚೀನಾ ಗಡಿಯಲ್ಲಿ ಭಾರತೀಯ ಯೋಧರು ಶಕ್ತಿ ಪ್ರದರ್ಶನ ತೋರಿದ್ದು, 600 ಸೇನಾ ಪ್ಯಾರಾಟ್ರೂಪರ್ ಗಳು ಆಕಾಶದಿಂದ ಜಿಗಿದಿದ್ದಾರೆ. ಚೀನಾದ ಗಡಿಯ ಬಳಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ.
ಮಾರ್ಚ್ 24 ಮತ್ತು 25 ರಂದು ವೈಮಾನಿಕ ಕಸರತ್ತು ನಡೆಸುವ ವೇಳೆ ಭಾರತೀಯ ಸೇನೆಯ ವಾಯುಗಾಮಿ ಕ್ಷಿಪ್ರ ಕಾರ್ಯಪಡೆ(Rapid Response Team) ತಂಡದ ಸುಮಾರು 600 ಪ್ಯಾರಾಟ್ರೂಪರ್ ಗಳು ಸಿಲಿಗುರಿ ಕಾರಿಡಾರ್ ಬಳಿ ಆಕಾಶದಿಂದ ಜಿಗಿದಿದ್ದಾರೆ. ಈ ಪ್ರದೇಶವು ಚೀನಾದ ಗಡಿಯ ಸಮೀಪದಲ್ಲಿದೆ. ಆಯಕಟ್ಟಿನ ಪ್ರಮುಖ ಪ್ರದೇಶದಲ್ಲಿ ಕಳೆದ ಮೂರು ವಾರಗಳಲ್ಲಿ ನಡೆದ ಇಂತಹ ಎರಡನೇ ಕಸರತ್ತು ಇದಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಸಿಲಿಗುರಿ ಕಾರಿಡಾರ್ ಅನ್ನು ಭಾರತದ ‘ಚಿಕನ್ ನೆಕ್’ ಎಂದೂ ಕರೆಯುತ್ತಾರೆ, ಇದು ವಾಣಿಜ್ಯಿಕವಾಗಿ ಮತ್ತು ಭೌಗೋಳಿಕವಾಗಿ ಮಾತ್ರವಲ್ಲದೆ, ಕಾರ್ಯತಂತ್ರದ ದೃಷ್ಟಿಯಿಂದಲೂ ಭಾರತದ ಪ್ರಮುಖ ಪ್ರದೇಶವಾಗಿದೆ.
ಸಿಲಿಗುರಿ ಕಾರಿಡಾರ್ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದ ಗಡಿಯ ಭೂಭಾಗವಾಗಿದೆ ಮತ್ತು ಚೀನಾದ ಗಡಿಯೂ ಸಹ ಹತ್ತಿರದಲ್ಲಿದೆ. ಇದು ಈಶಾನ್ಯ ಪ್ರದೇಶವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ಮಿಲಿಟರಿ ದೃಷ್ಟಿಕೋನದಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಇಂತಹ ಸ್ಥಳದಲ್ಲಿ ಕಣ್ಗಾವಲು, ಅಭ್ಯಾಸ ಮತ್ತು ಶತ್ರು ರೇಖೆಗಳನ್ನು ದಾಟುವಲ್ಲಿ ಶಕ್ತಿ ಪ್ರದರ್ಶಿಸುವುದು ಅಭ್ಯಾಸ ಕಾರ್ಯಾಚರಣೆ ಉದ್ದೇಶವಾಗಿತ್ತು. ಸಿಲಿಗುರಿಯು ವ್ಯೂಹಾತ್ಮಕವಾಗಿ ಮಹತ್ವದ್ದಾಗಿದೆ, ಆದ್ದರಿಂದ ಈ ಪ್ರದೇಶದಲ್ಲಿ ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ ಮತ್ತು ಪಶ್ಚಿಮ ಬಂಗಾಳ ಪೊಲೀಸರು ಗಸ್ತು ತಿರುಗುತ್ತಾರೆ.