ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಲಾಗಿದ್ದ ಗಡುವು ಮಾರ್ಚ್ 31ರಂದು ಮುಕ್ತಾಯವಾಗುತ್ತಿದ್ದು, ಅಷ್ಟರಲ್ಲಿ ಆಯೋಗದಿಂದ ವರದಿ ಪಡೆದು ನಿರ್ಧಾರ ಪ್ರಕಟಿಸಬೇಕು ಇಲ್ಲವಾದಲ್ಲಿ ಏಪ್ರಿಲ್ 14ರ ಬಳಿಕ ಮತ್ತೊಂದು ಹೋರಾಟಕ್ಕೆ ಮುಂದಾಗುವುದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಕಳೆದ ಡಿಸೆಂಬರ್ ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಗಡುವು ಮುಗಿಯುತ್ತಿದ್ದರೂ ಈ ಬಗ್ಗೆ ಮಾತನಾಡುತ್ತಿಲ್ಲ. ಹಿಂದಿನ ಸಿಎಂ ಯಡಿಯೂರಪ್ಪ ಅವರಂತೆ ಭರವಸೆ ಕೊಟ್ಟು ಕೈ ಕೊಡುವುದಿಲ್ಲ ಎಂದುಕೊಂಡಿದ್ದೇವೆ. ಕಳೆದ 10 ವರ್ಷಗಳಿಂದ ನಮ್ಮ ಸಮುದಾಯ ಯಡಿಯೂರಪ್ಪ ಅವರನ್ನು ನಂಬಿತ್ತು. ಆದರೆ ಮೀಸಲಾತಿ ಭರವಸೆ ಈಡೇರಿಸಲಿಲ್ಲ. ಈಗ ಸಿಎಂ ಬೊಮ್ಮಾಯಿ ನಂಬಿಕೆ ಉಳಿಸಿಕೊಳ್ಳಬೇಕಿದೆ ಎಂದರು.
ಉಕ್ರೇನ್‍ನಿಂದ ಪಲಾಯನ ಮಾಡಿದ ಗೆಳತಿಗೆ ವಿಮಾನ ನಿಲ್ದಾಣದಲ್ಲೇ ಪ್ರಪೋಸ್ ಮಾಡಿದ ದೆಹಲಿ ವಕೀಲ..!
ನಾನು ನಿಮ್ಮ ಮನೆಗೆ ಬಂದು 24 ಗಂಟೆ ಕಾಯುವ ಸ್ವಾಮೀಜಿ ಅಲ್ಲ. ಕರೆದ ಕಡೆ ಬರುವವನೂ ಅಲ್ಲ, ಬೇರೆ ಸ್ವಾಮೀಜಿಗಳ ತರ ಅನುದಾನ ಅದು ಇದು ಎಂದು ತಮ್ಮ ಮನೆ ಬಾಗಿಲಿಗೆ ಬಂದಿಲ್ಲ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದೇವೆ. ಮಾರ್ಚ್ 31ರೊಳಗೆ ಆಯೋಗದಿಂದ ವರದಿ ತರಿಸಿಕೊಳ್ಳಬೇಕು ಇಲ್ಲವಾದಲ್ಲಿ ನಾವು ಮತ್ತೊಂದು ಸುತ್ತಿನ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ಸಿಎಂ ಸ್ಪಷ್ಟ ಪಡಿಸಲಿ. ಏಪ್ರಿಲ್ 14 ರಾಜ್ಯ ಸರ್ಕಾರಕ್ಕೆ ಕೊನೇ ಗಡುವು ನೀಡುತ್ತೇವೆ. ಅಷ್ಟರಲ್ಲಿ ಮೀಸಲಾತಿ ಬಗ್ಗೆ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಹೇಳಿದರು.