ಹಾವೇರಿ: ಸಮಾಜದ ನೆಮ್ಮದಿ ಹಾಳು ಮಾಡಿ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಇವರು ಜಾತ್ರೆಗಳಲ್ಲಿ ಧರ್ಮವನ್ನು ಬೆರೆಸಿದ್ದಾರೆ. ಇಂತಹವರನ್ನು ಎಲ್ಲಿಗೆ ಕಳುಹಿಸಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇಂತಹ ವಾತಾವರಣದಿಂದ ಚುನಾವಣೆಯನ್ನು ಗೆಲ್ಲಲು ಹೊರಟಿದ್ದಾರೆ. ಕಳೆದ ಎರಡು ವರ್ಷಗಳಿಂದ ನಿಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ. ಜನರು ಈ ಕುರಿತು ವಿಚಾರ ಮಾಡಬೇಕು ಎಂದು ಹೇಳಿದ್ದಾರೆ.
ಶಾಲೆ, ಕಾಲೇಜಿನಲ್ಲಿ ಒಬ್ಬರಿಗೊಬ್ಬರನ್ನು ಎತ್ತಿ ಕಟ್ಟುವವರು ಬೇಕೋ? ನೆಮ್ಮದಿಯ ಬದುಕು ಕೊಡಬೇಕೆಂದಿರುವ ನನ್ನಂಥವರು ಬೇಕೋ ಎಂದು ಪ್ರಶ್ನಿಸಿದ್ದಾರೆ. ನನಗೆ ಒಂದು ಅವಕಾಶ ಕೊಡಿ ನಿಮ್ಮ ಬದುಕು ಉತ್ತಮಗೊಳಿಸಿ ಕೊಡುತ್ತೇನೆ. ಹೇಳಿದಂತೆ ಮಾಡದಿದ್ದರೆ ಮತ್ತೆ ನಿಮ್ಮ ಮುಂದೆ ಬಂದು ನಿಲ್ಲುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತಕ್ಕೋಸ್ಕರ ಕೆಲವು ಸಮಸ್ಯೆಗಳನ್ನು ಹುಟ್ಟುಹಾಕಿದ್ದಾರೆ. ನಿಮ್ಮ ಮಕ್ಕಳ ಭವಿಷ್ಯ ಸರಿಪಡಿಸುವ ಸರ್ಕಾರ ತರಲು ಚಿಂತನೆ ಮಾಡಿ ಎಂದು ತಿಳಿಸುವುದಕ್ಕೆ ನಾನು ಬಂದಿದ್ದೇನೆ. ಹಾವೇರಿ ಜಿಲ್ಲೆಯಲ್ಲಿ 75 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲಾ ಕುಟುಂಬಗಳಿಗೂ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನಾನು ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಹಿರೇಕೆರೂರು ಭಾಗಕ್ಕೆ ಹೆಚ್ಚಾಗಿ ಬಂದಿದ್ದೇನೆ. ಸಮಾಜದ ನೆಮ್ಮದಿ ಒಡೆದು ಅಧಿಕಾರಕ್ಕೆ ಬರಲು ಯತ್ನಿಸುತ್ತಾರೆ. ಯುವಕರು ಅದಕ್ಕೆ ಅವಕಾಶವನ್ನು ಮಾಡಿಕೊಡಬಾರದು ಎಂದು ಹೇಳಿದ್ದಾರೆ.