ಪಾಕಿಸ್ತಾನದಲ್ಲಿ ಪ್ರಧಾನಿ ಕುರ್ಚಿ ಉಳಿಸಿಕೊಳ್ಳಲು ಇಮ್ರಾನ್ ಖಾನ್ ಹರಸಾಹಸ ಮಾಡ್ತಿದ್ದಾರೆ. ಈಗ ಪತ್ನಿ ಬುಶ್ರಾ ಬೀಬಿ ಕೂಡ ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರಂತೆ.
ಪತಿಯ ಅಧಿಕಾರ ಉಳಿಸಿಕೊಡಲು ಬುಶ್ರಾ ಬೀಬಿ, ವಾಮಾಚಾರದ ಮೊರೆ ಹೋಗಿದ್ದಾರಂತೆ. ಕೆಲವೊಂದು ನಿಗೂಢ ಕೆಲಸಗಳನ್ನು ಮಾಡಿದ್ದಾರೆ ಎನ್ನಲಾಗ್ತಾ ಇದೆ. ಇಮ್ರಾನ ಖಾನ್ ಪತ್ನಿ ವಾಮಾಚಾರ ಮಾಡಿದ್ದಾರೆ ಅಂತಾ ಪ್ರತಿಪಕ್ಷ ನಾಯಕ ಶಹಬಾಜ್ ಷರೀಫ್ ಆರೋಪ ಮಾಡಿದ್ದಾರೆ.
ಇಮ್ರಾನ್ ಖಾನ್ ನಿವಾಸ ಬನಿಗಾಲದಲ್ಲಿ ವಾಮಾಚಾರದ ಪ್ರಕ್ರಿಯೆಗಳು ನಡೆಯುತ್ತಿವೆಯಂತೆ. ಟನ್ ಗಟ್ಟಲೆ ಮಾಂಸವನ್ನು ಸುಡಲಾಗುತ್ತಿದೆ ಅನ್ನೋದು ಶಹಬಾಜ್ ಅವರ ಆರೋಪ. ತನ್ನನ್ನು ತಾನು ‘ಪೀರ್’ ಎಂದು ಬಣ್ಣಿಸಿಕೊಳ್ಳುವ ಬುಶ್ರಾ ಬೀಬಿ ಇದನ್ನೆಲ್ಲ ಮಾಡಿಸ್ತಿದ್ದಾರಂತೆ. ಈ ಹಿಂದೆ ಕೂಡ ಆಕೆಯ ವಿರುದ್ಧ ವಾಮಾಚಾರದ ಆರೋಪ ಕೇಳಿ ಬಂದಿತ್ತು.
ಪಾಕಿಸ್ತಾನದಲ್ಲಿ ಜನಸಾಮಾನ್ಯರಿಗೆ ಆಹಾರ ವಸ್ತುಗಳು ಸಿಗುತ್ತಿಲ್ಲವಂತೆ. ಮಕ್ಕಳಿಗೆ ಕುಡಿಯಲು ಹಾಲು ಸಹ ಇಲ್ಲ, ಅಂಥದ್ರಲ್ಲಿ ವಾಮಾಚಾರಕ್ಕಾಗಿ ಟನ್ ಗಟ್ಟಲೆ ಮಾಂಸ ಸುಡ್ತಿದ್ದಾರೆ ಅಂತಾ ನವಾಜ್ ಷರೀಫ್ ಅವರ ಸಹೋದರ ಮತ್ತು ಪಿಎಂಎಲ್ಎನ್ ನಾಯಕ ಶಹಬಾಜ್ ಷರೀಫ್ ಆರೋಪ ಮಾಡಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಅಸಂವಿಧಾನಿಕ ಮಾರ್ಗಗಳನ್ನು ಬಳಸ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಶ್ರಾ ಬೀಬಿ, ಇಮ್ರಾನ್ ಖಾನ್ ಅವರ ಮೂರನೇ ಪತ್ನಿ. ಮದುವೆಯಾದಾಗಿನಿಂದ್ಲೂ ಇಮ್ರಾನ್ ಖಾನ್ ಅವರ ಪಕ್ಷದ ಚುಕ್ಕಾಣಿ ಆಕೆಯ ಕೈಯ್ಯಲ್ಲೇ ಇದೆಯಂತೆ. ಪಕ್ಷದಲ್ಲಿ ಆಕೆ ಪ್ರತ್ಯೇಕ ಬಣವನ್ನೇ ಸೃಷ್ಟಿಸಿಕೊಂಡಿದ್ದು, ಬೆಂಬಲಿಗರು ಬುಶ್ರಾಗೆ ಹೆಚ್ಚು ನಿಷ್ಠರಾಗಿದ್ದಾರಂತೆ. ಇಮ್ರಾನ್ ಖಾನ್ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಪತ್ನಿ ಬುಶ್ರಾ ಅವರ ಸಹಾಯಕ್ಕೆ ಬರ್ತಾರೆ.
ತನ್ನ ಪತ್ನಿ ಬಹಳ ಬುದ್ಧಿವಂತೆ, ಆಡಳಿತಕ್ಕೆ ಸಂಬಂಧಿಸಿದ ವಿಷಯವನ್ನೆಲ್ಲ ಅವಳೊಂದಿಗೆ ಚರ್ಚಿಸ್ತೇನೆ ಅಂತಾ ಇಮ್ರಾನ್ ಖಾನ್ ಹೆಮ್ಮೆಯಿಂದ ಹೇಳಿಕೊಳ್ತಾರೆ. ಆದ್ರೆ ಇಮ್ರಾನ್ ಖಾನ್ ರ ಪತ್ನಿ ಒಬ್ಬ ಮಾಟಗಾತಿ ಅನ್ನೋ ಆರೋಪ ಆಗಾಗ ಕೇಳಿಬರ್ತಾನೇ ಇದೆ.