ಬರ್ಲಿನ್: ಟೆಸ್ಲಾ ತನ್ನ ಮೊದಲ ಯುರೋಪಿಯನ್ ಫ್ಯಾಕ್ಟರಿಯನ್ನು ಜರ್ಮನಿಯ ಬರ್ಲಿನ್‌ನಲ್ಲಿ ತೆರೆದಿದೆ. ಹೊಸ ಟೆಸ್ಲಾ ಪ್ಲಾಂಟ್ ಉದ್ಘಾಟನೆ ವೇಳೆ ಸಿಇಒ ಎಲೋನ್ ಮಸ್ಕ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಟೆಸ್ಲಾ ಸಿಇಒ ಎಲೋನ್ ಮಸ್ಕ್, ಜರ್ಮನಿಯ ರಾಜಧಾನಿಯ ಆಗ್ನೇಯದಲ್ಲಿರುವ ಗ್ರುನ್‌ಹೈಡ್‌ನಲ್ಲಿನ ಉದ್ಘಾಟನಾ ಸಮಾರಂಭದಲ್ಲಿ ಯಾವುದೇ ಪೂರ್ವಸಿದ್ಧತೆಯಿಲ್ಲದ ನೃತ್ಯ ಮಾಡಿದ್ದಾರೆ. ಮೊದಲ ಕಾರುಗಳು ವಿತರಣೆಗಾಗಿ ಕಾರ್ಖಾನೆಯಿಂದ ಹೊರಬಂದವು. ಹಸ್ತಾಂತರ ಸಮಾರಂಭದ ಸಮಯದಲ್ಲಿ, ಎಲೋನ್ ಮಸ್ಕ್ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.
ಮಸ್ಕ್ ನೃತ್ಯ ಕೌಶಲ್ಯವನ್ನು ತೋರಿಸುತ್ತಿರುವುದು ಇದೇ ಮೊದಲಲ್ಲ. ಚೀನಾದ ಶಾಂಘೈನಲ್ಲಿರುವ ಗಿಗಾಫ್ಯಾಕ್ಟರಿಯಲ್ಲಿ ನಿರ್ಮಿಸಲಾದ ಮೊದಲ ಟೆಸ್ಲಾವನ್ನು ವಿತರಿಸುವಾಗ ಎಲೋನ್ ಮಸ್ಕ್ ಡಾನ್ಸ್ ಮಾಡಿದ್ದರು.
ಕಂಪನಿಯು ತನ್ನ ಹೊಸ ಗಿಗಾ ಫ್ಯಾಕ್ಟರಿಯಲ್ಲಿ 12,000 ನೌಕರರನ್ನು ನೇಮಿಸುವುದಾಗಿ ಹೇಳಿದೆ. ಅಲ್ಲದೆ ಅದು ಸಂಪೂರ್ಣವಾಗಿ ಚಾಲನೆಗೊಂಡ ನಂತರ ವರ್ಷಕ್ಕೆ 500,000 ವಾಹನಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ. ಆರಂಭಿಕ ಉತ್ಪಾದನೆಯು ಟೆಸ್ಲಾದ ಮಾಡೆಲ್ ವೈ ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ವಾಹನದ ಮೇಲೆ ಕೇಂದ್ರೀಕರಿಸುತ್ತದೆ.