ಬೆಂಗಳೂರು: ಆಸ್ತಿ ಖರೀದಿ ಸಂದರ್ಭದಲ್ಲಿ ಮಾರ್ಗಸೂಚಿ ಶುಲ್ಕ ರಿಯಾಯಿತಿ ಪಡೆಯಲು ಮಾ. 31 ರವರೆಗೆ ಅವಕಾಶವಿದ್ದು, ಅದನ್ನು ಮುಂದುವರೆಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಹೆಚ್.ಎಂ. ರಮೇಶ್ ಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಆಸ್ತಿ ಖರೀದಿ, ನೋಂದಣಿ ಸಂದರ್ಭದಲ್ಲಿ ಪಾವತಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಮಾರ್ಗಸೂಚಿ ದರದ ಶೇಕಡ 10 ರಷ್ಟು ಕಡಿತಗೊಳಿಸಿದ್ದು, ಮಾರ್ಚ್ 31 ರವರೆಗೆ ರಿಯಾಯಿತಿ ಪಡೆಯಲು ಅವಕಾಶವಿದೆ. ಮಾರ್ಚ್ 31 ರ ನಂತರ ನೋಂದಣಿ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೆಲವು ಕಡೆಗಳಲ್ಲಿ ಮಾರ್ಗಸೂಚಿ ದರ ನಿಗದಿಯಲ್ಲಿ ವ್ಯತ್ಯಾಸವಾಗಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಕೊರೋನಾ ಸಂದರ್ಭದಲ್ಲಿ ನೋಂದಣಿ ಪ್ರಕ್ರಿಯೆಗೆ ಉತ್ತೇಜನ ನೀಡಲು ಶೇಕಡ 10 ರಷ್ಟು ರಿಯಾಯಿತಿ ನೀಡಲಾಗಿದೆ. ಮಾ. 31 ರ ವರೆಗೆ ರಿಯಾಯಿತಿ ಪಡೆಯಲು ಅವಕಾಶವಿದ್ದು, ಅದನ್ನು ಮುಂದುವರೆಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.