ನೀವೇನಾದ್ರೂ ಪಿಎಫ್ ಖಾತೆಯನ್ನು ಹೊಂದಿದ್ದರೆ ಈ ಮಾಹಿತಿ ನಿಮಗೆ ತಿಳಿದಿರಲೇಬೇಕು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿದೆ. ಇ-ನಾಮನಿರ್ದೇಶನವಿಲ್ಲದೆ ನೀವು ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಸಹ ಪರಿಶೀಲಿಸಲಾಗುವುದಿಲ್ಲ. ಇದರೊಂದಿಗೆ ಅನೇಕ ಇತರ ಪ್ರಯೋಜನಗಳನ್ನು ಸಹ ಪಡೆಯಲು ಸಾಧ್ಯವಾಗುವುದಿಲ್ಲ.
ಪಿಎಫ್ ಖಾತೆಯಲ್ಲಿ ಇ-ನಾಮಿನೇಶನ್ ಮಾಡುವುದರಿಂದ ಖಾತೆದಾರರ ಕುಟುಂಬಕ್ಕೆ ಸಾಮಾಜಿಕ ಭದ್ರತೆ ದೊರೆಯುತ್ತದೆ. ಪಿಎಫ್ ಗೆ ನಾಮಿನಿ ಯಾರು ಎಂಬ ಮಾಹಿತಿಯನ್ನು ಸಲ್ಲಿಸಲು ಸಹ ಅವಕಾಶ ನೀಡಲಾಗಿದೆ. ಈ ಮೊದಲು ನಾಮನಿರ್ದೇಶನಗೊಳ್ಳದವರಿಗೂ ಅವಕಾಶ ಕೊಟ್ಟಿರೋದು ವಿಶೇಷ.
ನಾಮಿನಿಯ ಹೆಸರು, ಜನ್ಮದಿನಾಂಕ ಸೇರಿದಂತೆ ಇತರ ವಿವರಗಳನ್ನು ಆನ್ ಲೈನ್ ನಲ್ಲೇ ನವೀಕರಣ ಮಾಡಬಹುದು. ಪಿಎಫ್ ಖಾತೆದಾರರೇ ಖುದ್ದಾಗಿ ಇ-ನಾಮನಿರ್ದೇಶನ ಮಾಡಬೇಕು.
ಖಾತೆದಾರರ ಸಾವು ಸಂಭವಿಸಿದಲ್ಲಿ, ನಾಮಿನಿ ಅಥವಾ ಅವರ ಕುಟುಂಬ ಸದಸ್ಯರಿಗೆ ಪಿಎಫ್, ಪಿಂಚಣಿ ಮತ್ತು ವಿಮೆಗೆ ಸಂಬಂಧಿಸಿದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ನಾಮಿನಿಗಳು ಈ ಮೊತ್ತಕ್ಕಾಗಿ ಆನ್ ಲೈನ್ ನಲ್ಲೂ ಅರ್ಜಿ ಸಲ್ಲಿಸಬಹುದು.
EPFO ಚಂದಾದಾರರು, ಎಂಪ್ಲಾಯಿ ಡಿಪಾಸಿಟ್ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI ಇನ್ಶುರೆನ್ಸ್ ಕವರ್) ಅಡಿಯಲ್ಲಿ ವಿಮಾ ರಕ್ಷಣೆಯ ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ನಾಮಿನಿಗೆ ಗರಿಷ್ಠ 7 ಲಕ್ಷ ರೂಪಾಯಿ ವಿಮಾ ರಕ್ಷಣೆಯನ್ನು ಪಾವತಿಸಲಾಗುತ್ತದೆ. ಯಾವುದೇ ನಾಮನಿರ್ದೇಶನವಿಲ್ಲದೆ ಸದಸ್ಯರು ಮರಣಹೊಂದಿದರೆ ಸಮಸ್ಯೆಯಾಗುತ್ತದೆ.
- EPF/EPS ನಾಮಿನೇಶನ್ ಗಾಗಿ ಮೊದಲು EPFOದ ಅಧಿಕೃತ ವೆಬ್ ಸೈಟ್ https://www.epfindia.gov.in/ ಗೆ ವಿಸಿಟ್ ಮಾಡಿ.
- ಸರ್ವಿಸಸ್ ವಿಭಾಗದಲ್ಲಿ FOR EMPLOYEES ಮೇಲೆ ಕ್ಲಿಕ್ ಮಾಡಿ, ನಂತರ Member UAN/Online Service (OCS/OTCP) ಮೇಲೆ ಕ್ಲಿಕ್ ಮಾಡಿ.
- ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ UAN ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆಗಿ.
- Manage Tab ಮೂಲಕ E-Nomination ಸೆಲೆಕ್ಟ್ ಮಾಡಿ. ಸ್ಕ್ರೀನ್ ನಲ್ಲಿ Provide Details ಟ್ಯಾಬ್ ಬರುತ್ತದೆ. ಅದಾದ ಬಳಿಕ Save ಮೇಲೆ ಕ್ಲಿಕ್ ಮಾಡಿ.
- ಫ್ಯಾಮಿಲಿ ಡಿಕ್ಲೆರೇಶನ್ ಗಾಗಿ Yes ಮೇಲೆ ಕ್ಲಿಕ್ ಮಾಡಿ. ನಂತರ Add family details ಮೇಲೆ ಕ್ಲಿಕ್ ಮಾಡಿ. ಇಲ್ಲಿ ಹೆಚ್ಚುವರಿ ನಾಮಿನಿಗಳನ್ನೂ ಸೇರಿಸಬಹುದು.
- ಇಲ್ಲಿ Nomination Details ಕ್ಲಿಕ್ ಮಾಡಿ ನಂತರ Save EPF Nomination ಮೇಲೆ ಕ್ಲಿಕ್ ಮಾಡಿ.
- ಇಲ್ಲಿ OTP ಜನರೇಟ್ ಮಾಡಲು E-sign ಮೇಲೆ ಕ್ಲಿಕ್ ಮಾಡಿದ್ರೆ ಆಧಾರ್ ಕಾರ್ಡ್ ನಲ್ಲಿ ರಿಜಿಸ್ಟರ್ ಆಗಿರೋ ಮೊಬೈಲ್ ನಂಬರ್ ಗೆ ಬಂದ ಓಟಿಪಿಯನ್ನು ನಮೂದಿಸಿ.
- ಬಳಿಕ ನಿಮ್ಮ ಇ-ನಾಮನಿರ್ದೇಶನ ರಿಜಿಸ್ಟರ್ ಆಗುತ್ತದೆ. ನಂತರ ನೀವು ಯಾವುದೇ ದಾಖಲೆ ಅಥವಾ ಹಾರ್ಡ್ ಕಾಪಿಯನ್ನು ಕಳಿಸುವ ಅಗತ್ಯವಿರುವುದಿಲ್ಲ.