ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಸುದ್ದಿಯಿದೆ. ಡಿಎ ಮತ್ತು ಡಿಆರ್ ನಲ್ಲಿ ಹೆಚ್ಚಳದ ಬಳಿಕ ಉದ್ಯೋಗಿಗಳು ಮತ್ತು ಪಿಂಚಣಿದಾರರು ಈಗ ಮತ್ತೊಂದು ಭತ್ಯೆಯನ್ನು ಪಡೆಯಬಹುದು. ಇಲ್ಲಿಯವರೆಗೆ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆಯನ್ನು (CEA) ಪಡೆಯಲು ಸಾಧ್ಯವಾಗದ ಎಲ್ಲಾ ಉದ್ಯೋಗಿಗಳು, 2022ರ ಮಾರ್ಚ್31ರೊಳಗೆ ಅರ್ಜಿ ಸಲ್ಲಿಸಬೇಕು.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಭತ್ಯೆ ನೀಡಲಾಗುತ್ತದೆ. 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ತಿಂಗಳಿಗೆ 2,250 ರೂ.ಭತ್ಯೆ ಕೊಡಲಾಗುತ್ತಿತ್ತು. ಆದ್ರೆ ಕಳೆದ ವರ್ಷ ಕೊರೊನಾದಿಂದಾಗಿ ಶಾಲೆಗಳು ಬಂದ್ ಆಗಿದ್ದವು. ಈ ಕಾರಣಕ್ಕೆ ನೌಕರರಿಗೆ ಈ ಭತ್ಯೆ ಪಡೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿಯೇ ಭತ್ಯೆ ಪಡೆಯಲು ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ.
ಮಕ್ಕಳ ಶಿಕ್ಷಣ ಭತ್ಯೆಯನ್ನು ಪಡೆಯಲು ಕೇಂದ್ರ ಸರ್ಕಾರಿ ನೌಕರರು ಶಾಲಾ ಪ್ರಮಾಣಪತ್ರ ಮತ್ತು ದಾಖಲಾತಿಗಳನ್ನು ಸಲ್ಲಿಸಬೇಕು. ಶಾಲೆಯಿಂದ ಪಡೆದ ಘೋಷಣೆಯಲ್ಲಿ, ಮಗು ತಮ್ಮ ಸಂಸ್ಥೆಯಲ್ಲಿ ಓದುತ್ತಿದೆ ಎಂಬುದು ಸ್ಪಷ್ಟವಾಗಿರಬೇಕು. CEA ಕ್ಲೈಮ್‌ಗಾಗಿ ಮಗುವಿನ ರಿಪೋರ್ಟ್ ಕಾರ್ಡ್, ಸ್ವಯಂ ದೃಢೀಕರಿಸಿದ ಪ್ರತಿ ಮತ್ತು ಶುಲ್ಕ ರಶೀದಿಯನ್ನು ಸಹ ಲಗತ್ತಿಸಬೇಕಾಗುತ್ತದೆ. ಈ ಸೌಲಭ್ಯ ಮಾರ್ಚ್ 2020 ಮತ್ತು ಮಾರ್ಚ್ 2021ರಲ್ಲಿ ಕೊನೆಗೊಳ್ಳುವ ಶೈಕ್ಷಣಿಕ ವರ್ಷಕ್ಕೆ ಮಾತ್ರ ಲಭ್ಯವಿರುತ್ತದೆ.
ಈ ಭತ್ಯೆಯನ್ನು ಉದ್ಯೋಗಿಯ ಇಬ್ಬರು ಮಕ್ಕಳಿಗೆ ನೀಡಲಾಗುತ್ತದೆ. ಪ್ರತಿ ಮಗುವಿಗೆ ತಿಂಗಳಿಗೆ 2250 ರೂ. ಅಂದರೆ ನೌಕರರಿಗೆ ಇಬ್ಬರು ಮಕ್ಕಳಿದ್ದರೆ ತಿಂಗಳಿಗೆ 4500 ರೂಪಾಯಿ ಸಿಗುತ್ತದೆ. ಆದರೆ ಎರಡನೇ ಮಗು ಅವಳಿಗಳಾಗಿದ್ದರೆ ಮೊದಲ ಮಗುವಿನೊಂದಿಗೆ ಅವಳಿ ಮಕ್ಕಳ ಶಿಕ್ಷಣಕ್ಕೂ ಈ ಭತ್ಯೆ ನೀಡಲಾಗುತ್ತದೆ.