ಖೈಬರ್-ಪಖ್ತುಂಖ್ವಾದಲ್ಲಿ ಸ್ಥಳೀಯಾಡಳಿತ ಚುನಾವಣೆಗೆ ಮುನ್ನ ಸ್ವಾತ್ ನಲ್ಲಿ ನಡೆದ ರ್ಯಾಲಿಯಲ್ಲಿ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಪಾಕಿಸ್ತಾನದ ಉನ್ನತ ಚುನಾವಣಾ ಸಂಸ್ಥೆ 50,000 ರೂಪಾಯಿ ದಂಡ ವಿಧಿಸಿದೆ.
ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಸ್ವಾತ್ ಗೆ ಭೇಟಿ ನೀಡುವುದನ್ನು ಮಾರ್ಚ್ 15 ರಂದು ಪಾಕಿಸ್ತಾನದ ಚುನಾವಣಾ ಆಯೋಗವು(ECP) ನಿರ್ಬಂಧಿಸಿತ್ತು, ಆದರೆ, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನಿರ್ದೇಶನಗಳನ್ನು ನಿರ್ಲಕ್ಷಿಸಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು.
ಹೊಸ ಇಸಿಪಿ ನೀತಿ ಸಂಹಿತೆಯ ಪ್ರಕಾರ, ಯಾವುದೇ ಸಾರ್ವಜನಿಕ ಕಚೇರಿ ಹೊಂದಿರುವವರು ಚುನಾವಣೆ ನಡೆಯುವ ಜಿಲ್ಲೆಗಳಿಗೆ ಭೇಟಿ ನೀಡುವಂತಿಲ್ಲ. ಖೈಬರ್-ಪಖ್ತುಂಖ್ವಾ ಸ್ಥಳೀಯ ಆಡಳಿತದ ಎರಡನೇ ಹಂತದ ಚುನಾವಣೆ ಮಾರ್ಚ್ 31 ರಂದು ನಿಗದಿಯಾಗಿದೆ.
ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಇಸಿಪಿ ಖಾನ್ ಅವರಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿತ್ತು.
ನೋಟೀಸ್ ವಿರುದ್ಧ ಪ್ರಧಾನಿ ಮತ್ತು ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಸಾದ್ ಉಮರ್ ಇಸ್ಲಾಮಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪ್ರಕಾರ, ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಹೊಸ ಶಾಸನದ ಹೊರತಾಗಿಯೂ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.
ಆದಾಗ್ಯೂ, ಪಾರದರ್ಶಕ ಚುನಾವಣೆಗಾಗಿ ನೀತಿ ಸಂಹಿತೆಯನ್ನು ರೂಪಿಸಲು ಆಯೋಗವು ಆದೇಶವನ್ನು ಹೊಂದಿದೆ ಎಂದು ಹೇಳುವ ಮೂಲಕ, ಪ್ರಧಾನ ಮಂತ್ರಿ ವಿರುದ್ಧ ಮುಂದುವರಿಯದಂತೆ ಇಸಿಪಿಯನ್ನು ನಿರ್ಬಂಧಿಸಲು IHC ನಿರಾಕರಿಸಿತು.
ಖೈಬರ್-ಪಖ್ತುಂಖ್ವಾ ಸ್ಥಳೀಯಾಡಳಿತ ಚುನಾವಣೆಯ ಎರಡನೇ ಹಂತದ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಇಸಿಪಿ ಇಮ್ರಾನ್ ಖಾನ್ ಗೆ ನಿಷೇಧ ಹೇರಿದೆ.