ಪಾಳು ಬಿದ್ದ ಗೋದಾಮಿನಲ್ಲಿ ಭಾರೀ ಬೆಂಕಿ ಹೊತ್ತಿಕೊಂಡ ಪರಿಣಾಮ 11 ಕಾರ್ಮಿಕರು ಸಜೀವ ದಹನವಾದ ಘಟನೆಯು ಹೈದರಾಬಾದ್ನ ಭೊಯಿಗುಡಾ ಪ್ರದೇಶದಲ್ಲಿ ನಡೆದಿದೆ. ಬೆಂಕಿಯನ್ನು ಹತೋಟಿಗೆ ತರಲು ಆರು ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿವೆ.
ಇದರಲ್ಲಿ ಓರ್ವ ಕಾರ್ಮಿಕ ಗೋದಾಮಿನ ಕಿಟಕಿಯನ್ನು ಒಡೆದು ಹೊರಬರುವ ಮೂಲಕ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ನೀಡಿರುವ ಮಾಹಿತಿಯ ಪ್ರಕಾರ, ಗೋದಾಮಿನಲ್ಲಿ ಸಿಲುಕಿದ್ದ ಎಲ್ಲಾ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಮೃತದೇಹಗಳನ್ನು ಸಿಕಂದರಾಬಾದ್ನ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಂತ್ರಸ್ತರ ಗುರುತು ಪತ್ತೆ ಮಾಡಲು ಡಿಎನ್ಎ ಪರೀಕ್ಷೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮೃತಪಟ್ಟ ಎಲ್ಲಾ ಕಾರ್ಮಿಕರು ವಲಸೆ ಕಾರ್ಮಿಕರಾಗಿದ್ದು ಬಿಹಾರ ಮೂಲದವರಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.