ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಅಪ್ರಾಪ್ತ ವಯಸ್ಕರು ಮತ್ತು ಇಬ್ಬರು ಡಿಎಂಕೆ ಕಾರ್ಯಕರ್ತರು ಸೇರಿದಂತೆ 8 ಜನರು ಮಹಿಳೆ ಮೇಲೆ ಆರು ತಿಂಗಳಲ್ಲಿ ಅನೇಕ ಬಾರಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಕೃತ್ಯದ ದೃಶ್ಯ ಚಿತ್ರೀಕರಿಸಿ ಬೆದರಿಕೆ ಹಾಕಿದ್ದಾರೆ. ಮಹಿಳೆ ವಿರೋಧಿಸಿದರೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಜಿಲ್ಲಾ ಪೊಲೀಸರು ಎಲ್ಲಾ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಆರೋಪಿಗಳು ಅಪ್ರಾಪ್ತರಾಗಿದ್ದು, ಅವರಲ್ಲಿ ಇಬ್ಬರು ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಗೆ ಸೇರಿದವರು.
ಪೋಲೀಸರ ಪ್ರಕಾರ, ಸಂತ್ರಸ್ತೆ ತನ್ನ ನಿವಾಸದ ಬಳಿಯ ಗೋಡೌನ್ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಹರಿಹರನ್ ನನ್ನು ಭೇಟಿಯಾಗಲು ಆಮಿಷವೊಡ್ಡಿದ್ದಳು. ನಂತರದಲ್ಲಿ ಹರಿಹರನ್ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದಳು. ಆತ ಸರಸದ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದ. ಆ ವಿಡಿಯೋವನ್ನು ಆತನ ಸ್ನೇಹಿತರು ಕೂಡ ನೋಡಿದ್ದಲ್ಲದೇ, ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ, ಪ್ರಮುಖ ಆರೋಪಿ ಮತ್ತು ಆತನ ಸಹಚರರು ಮಹಿಳೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ನಂತರ ಮಹಿಳೆ ವಿರುದುನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಅತ್ಯಾಚಾರ ಮತ್ತು ತುಳಿತಕ್ಕೊಳಗಾದ ಸಮುದಾಯಗಳ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಅಪರಾಧಿಗಳನ್ನು ದಾಖಲಿಸಲಾಗಿದೆ.
ಡಿಎಂಕೆ ನಾಯಕಿ ಕನಿಮೊಳಿ ಅವರು, ಆರೋಪಿಗಳ ವಿರುದ್ಧ ಅವರ ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ. ವಿರುದುನಗರ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿರುವುದು ಸಮಾಧಾನಕರ ಸಂಗತಿ. ಆರೋಪಿಗಳು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.