ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಮರ್ಸಿಡಿಸ್ ಬೆನ್ಜ್ ಕಾರ್ಖಾನೆಯೊಳಗೆ ಚಿರತೆಯೊಂದು ನುಗ್ಗಿದ ಪರಿಣಾಮ, ಕೈಗಾರಿಕೆಯಲ್ಲಿ ಆರು ಗಂಟೆಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸಲಾಗಿರೋ ಘಟನೆ ನಡೆದಿದೆ.
ಪುಣೆಯ ವಿಸ್ತಾರವಾದ ಮರ್ಸಿಡಿಸ್ ಬೆನ್ಜ್ ಕಾರ್ಖಾನೆಯೊಳಗೆ ಚಿರತೆಯೊಂದು ಅಡ್ಡಾಡಿದೆ. ಇದರಿಂದಾಗಿ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿಯ ಕಠಿಣ ಪ್ರಯತ್ನದ ನಂತರ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.
ಸೋಮವಾರ ಬೆಳಗಿನ ಜಾವ ಐಷಾರಾಮಿ ಕಾರು ತಯಾರಿಕಾ ಕಾರ್ಖಾನೆ ಆವರಣದಲ್ಲಿ ಚಿರತೆಯೊಂದು ಓಡಾಡುವುದನ್ನು ಕಾರ್ಮಿಕರು ನೋಡಿ ಭೀತಿಗೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಬಲೆಗೆ ಕೆಡವಲು ಕಾರ್ಯಾಚರಣೆ ಕೈಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ, ಸ್ಥಳೀಯ ಪೊಲೀಸರ ಸಲಹೆಯ ಮೇರೆಗೆ ತಕ್ಷಣ ಅಲ್ಲಿದ್ದ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಸುಮಾರು ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕಾರ್ಖಾನೆಯ ಶೆಡ್ ಒಂದರ ಮಹಡಿಯಲ್ಲಿ ಅಡಗಿದ್ದ ಚಿರತೆಯನ್ನು ಪತ್ತೆ ಹಚ್ಚಿ ಸೆರೆಹಿಡಿಯಲಾಯಿತು. ಗಂಡು ಚಿರತೆಯಾಗಿದ್ದು, ಅದಕ್ಕೆ ಸುಮಾರು 2 ರಿಂದ 3 ವರ್ಷ ವಯಸ್ಸಾಗಿರಬಹುದು ವನ್ಯಜೀವಿ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ.