ಇಂಟರ್ನೆಟ್ ನಲ್ಲಿ ತಮಾಷೆ, ಮನರಂಜನೆ ಮುಂತಾದ ವಿಡಿಯೋಗಳ ಜೊತೆಗೆ ವಿಭಿನ್ನ ಶೈಲಿಯ ಆಹಾರದ ವಿಡಿಯೋಗಳು ಕೂಡ ವೈರಲ್ ಆಗಿವೆ. ಇದೀಗ ವಿಶಿಷ್ಟವಾದ ಆಹಾರ ವ್ಯಾಪಾರದ ವಿಡಿಯೋವೊಂದು ವೈರಲ್ ಆಗಿದೆ.
ಹೌದು, ಕ್ಯಾಂಡಿಯನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿಯೊಬ್ಬರು ಹಣದ ಬದಲಿಗೆ ತಲೆಗೂದಲನ್ನು ತೆಗೆದುಕೊಳ್ಳುತ್ತಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಯೂಟ್ಯೂಬ್ ಫುಡ್ ಬ್ಲಾಗರ್ ವಿಶಾಲ್ ಎಂಬುವವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಬೀದಿ ವ್ಯಾಪಾರಿ ಪ್ರತಾಪ್ ಸಿಂಗ್ ಅವರು ಬುಧಿಯಾ ಕೆ ಬಾಲ್ ಎಂದು ಕರೆಯಲ್ಪಡುವ ಮಿಠಾಯಿಗಳನ್ನು ಮಾರಾಟ ಮಾಡುತ್ತಾರೆ. ಮಕ್ಕಳು ಕೈಬೆರಳೆಣಿಕೆಯಷ್ಟು ಕೂದಲಿನ್ನು ಹಿಡಿದು ವ್ಯಾಪಾರಿಯ ಮುಂದೆ ಸಾಲಾಗಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಕ್ಕಳಿಂದ ತಲೆಗೂದಲನ್ನು ಸ್ವೀಕರಿಸುವ ಅವರು, ಕ್ಯಾಂಡಿಯನ್ನು ಮಕ್ಕಳಿಗೆ ನೀಡುತ್ತಾರೆ. ಬಾಲಕನೊಬ್ಬ ತನ್ನ ತಾಯಿಯ ತಲೆಯಿಂದ ಉದುರಿದ ಕೂದಲನ್ನು ತಂದಿದ್ದಾಗಿ ಹೇಳಿದ್ದಾನೆ.
ಕೂದಲನ್ನು ಸಂಗ್ರಹಿಸುವ ಮಾರಾಟಗಾರ ಪ್ರತಿ ಕೆ.ಜಿಗೆ 3,000 ರೂ.ಗೆ ವಿಗ್ ತಯಾರಕರಿಗೆ ಅದನ್ನು ಮಾರಾಟ ಮಾಡುತ್ತಾರೆ. ಕಳೆದ ಐದು ವರ್ಷಗಳಿಂದ ವ್ಯಾಪಾರಿ ಈ ರೀತಿಯ ವಿನಿಮಯ ವ್ಯವಸ್ಥೆಯ ಮೂಲಕ ಕ್ಯಾಂಡಿಯನ್ನು ಮಾರಾಟ ಮಾಡುತ್ತಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜನರು ವ್ಯಾಪಾರಿಯ ಪರಿಕಲ್ಪನೆಗೆ ಸಲಾಂ ಎಂದಿದ್ದಾರೆ.