ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಮುಂದುವರಿಯಲಿದ್ದಾರೆ. ಸೋಮವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.
ರಾಜ್ಯ ಬಿಜೆಪಿಯ ಕೇಂದ್ರ ವೀಕ್ಷಕರು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಹಿರಿಯ ನಾಯಕಿ ಮೀನಾಕ್ಷಿ ಲೇಖಿ ಡೆಹ್ರಾಡೂನ್ ನಲ್ಲಿರುವ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಭಾರತೀಯ ಜನತಾ ಪಕ್ಷವು ಉತ್ತರಾಖಂಡದಲ್ಲಿ 46 ವಿಧಾನಸಭಾ ಸ್ಥಾನಗಳನ್ನು ಗೆದ್ದ ನಂತರ ಸತತ ಎರಡನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡಿದೆ. ಆದಾಗ್ಯೂ, ಪುಷ್ಕರ್ ಸಿಂಗ್ ಧಾಮಿ ಅವರು ಉಧಮ್ಸಿಂಗ್ ನಗರ ಜಿಲ್ಲೆಯ ಖತಿಮಾ ಕ್ಷೇತ್ರದಿಂದ ಸೋತರು. ಮಾರ್ಚ್ 11 ರಂದು ಕಾಂಗ್ರೆಸ್ ಅಭ್ಯರ್ಥಿ ಭುವನ್ ಚಂದ್ರ ಕಪ್ರಿ ವಿರುದ್ಧ 6,579 ಮತಗಳ ಅಂತರದಿಂದ ಸೋತ ನಂತರ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಾಖಂಡ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನೇ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದ್ದು, ಉತ್ತಾಖಂಡ್ ಮುಖ್ಯಮಂತ್ರಿಯಾಗಿ ಧಾಮಿ ಮುಂದುವರೆಯಲಿದ್ದಾರೆ.