ಮಾರ್ಚ್ ತಿಂಗಳು ಇನ್ನೂ ಮುಗಿದಿಲ್ಲ, ಅಷ್ಟರಲ್ಲಾಗ್ಲೇ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ಮಿತಿಮೀರಿದೆ. ಮೇ-ಜೂನ್‌ನಂತೆ ಬಿಸಿಗಾಳಿಯ ಅಬ್ಬರವೂ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ 40 ಡಿಗ್ರಿ ದಾಟಿದೆ. ಈ ಬಾರಿಯ ಅಕಾಲಿಕ ತಾಪಕ್ಕೆ ಕಾರಣ ಏನು ಅನ್ನೋದನ್ನು ನೋಡೋಣ.
ರಾಜಧಾನಿ ದೆಹಲಿಯ ಸಫ್ದರ್‌ಜಂಗ್ ಮತ್ತು ಲೋಧಿ ರಸ್ತೆಯಲ್ಲಿ ಭಾನುವಾರ 38.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 7 ಡಿಗ್ರಿ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಈ ವರ್ಷ ಬಿಸಿಲಿನ ತಾಪವು ಹಿಂದಿನ ವರ್ಷಗಳಿಗಿಂತ ಹೆಚ್ಚಾಗುವ ಸಾಧ್ಯತೆಯಿದೆ ಅಂತಾ ಹೇಳಿದೆ.
ಬಿಸಿಲು ಇಷ್ಟೊಂದು ಹೆಚ್ಚಾಗಲು ಕಾರಣ Anti cyclone ಅಂತಾ ಹವಾಮಾನ ಇಲಾಖೆ ಹೇಳಿದೆ. ಸಾಮಾನ್ಯವಾಗಿ ಮಾರ್ಚ್ ಅಂತ್ಯದಲ್ಲಿ ರಾಜಸ್ಥಾನದಲ್ಲಿ ರೂಪುಗೊಳ್ಳುವ Anti cyclone , ಈ ಬಾರಿ ಆರಂಭದಲ್ಲಿ ರೂಪುಗೊಂಡಿದೆ. ಥಾರ್ ಮರುಭೂಮಿ ಮತ್ತು ಪಾಕಿಸ್ತಾನದಿಂದ ಬಿಸಿಗಾಳಿ ಬರಲಾರಂಭಿಸಿದ್ರಿಂದ ತಾಪಮಾನ ಹೆಚ್ಚಾಗುತ್ತಿದೆ. ಮುಂದಿನ ಕೆಲ ದಿನಗಳವರೆಗೆ ತಾಪಮಾನದಲ್ಲಿ ಸ್ಥಿರವಾದ ಏರಿಕೆ ಪಕ್ಕಾ ಅಂತ ಹೇಳಲಾಗ್ತಿದೆ.
Anti cyclone ಅಂದ್ರೆ ಗಾಳಿಯ ಚದುರುವಿಕೆ ಎಂದರ್ಥ. ಹೆಸರೇ ಸೂಚಿಸುವಂತೆ ಗಾಳಿಯ ದಿಕ್ಕು ಸೈಕ್ಲೋನಿಕ್ ವಿಂಡ್‌ನ ದಿಕ್ಕಿಗೆ ವಿರುದ್ಧವಾಗಿರುತ್ತದೆ. ಆಂಟಿ-ಸೈಕ್ಲೋನಿಕ್ ಪರಿಚಲನೆಯಲ್ಲಿ, ಹೆಚ್ಚಿನ ಒತ್ತಡದ ಪ್ರದೇಶವನ್ನು ರಚಿಸಲಾಗುತ್ತದೆ, ಇದರಲ್ಲಿ ಗಾಳಿ ಚದುರಿ ಹೋಗುತ್ತದೆ ಮತ್ತು ಕೆಳಮುಖ ಮಾಡುತ್ತದೆ. ಹೆಚ್ಚಿನ ಒತ್ತಡದಿಂದಾಗಿ, ಬಲವಾದ ಗಾಳಿ ಸ್ಫೋಟವು ಮೇಲಿನಿಂದ ಕೆಳಕ್ಕೆ ಸಂಭವಿಸುತ್ತದೆ. ಬಿಸಿ ಗಾಳಿಯು ಕೆಳಗೆ ಬರುತ್ತದೆ. ಗಾಳಿಯ ಸಂಕೋಚನದಿಂದಾಗಿ, ಅದು ಬಿಸಿಯಾಗುತ್ತದೆ ಮತ್ತು ಅದರ ತೇವಾಂಶವು ಕಡಿಮೆ ಇರುತ್ತದೆ.
ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಬಿಸಿ ಗಾಳಿ ಬೀಸುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಬಿಸಿಲು ಮಿತಿಮೀರಿದೆ. ಉಷ್ಣಾಂಶ ಸಾಮಾನ್ಯಕ್ಕಿಂತಲೂ 3-4 ಡಿಗ್ರಿಗಳಷ್ಟು ಹೆಚ್ಚಾಗಿದ್ದು, ಅತ್ಯಧಿಕ 42.7 ಡಿಗ್ರಿ ಉಷ್ಣಾಂಶ ಈಗಾಗ್ಲೇ ದಾಖಲಾಗಿದೆ.