ದೇಶದಲ್ಲಿ ಕೋರ್ಟ್ ಮೆಟ್ಟಿಲೇರುವ ಪ್ರಕರಣಗಳಲ್ಲಿ ಕೆಲವೊಂದಿಷ್ಟು ಕ್ಷುಲ್ಲಕ ಕಾರಣಗಳಿಂದ ಕೂಡಿರುತ್ತವೆ ಹಾಗೂ ಇವು ನ್ಯಾಯಾಲಯದ ಸಮಯವನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಪ್ರಕರಣಗಳಿಗೆ ನಿದರ್ಶನ ಎಂಬಂತೆ ಮುಂಬೈನ ಸರಕಾರಿ ಟಂಕ ಶಾಲೆ (ನಾಣ್ಯ ತಯಾರಿಸುವ ಕಾರ್ಖಾನೆ)ಯ ಉದ್ಯೋಗಿಯು ಎರಡು ಕಾಯಿನ್ ಕದ್ದ ಎಂಬ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿ ಈಗ ಮುಂಬೈ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಆರ್.ಆರ್. ಚಬುಕ್ಸ್ವಾರ್ ಎಂಬುವವರು ಟಂಕಶಾಲೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, 2020 ಜುಲೈ 24ರಂದು ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಟಂಕ ಶಾಲೆಯಿಂದ 20 ರೂ. ಮೌಲ್ಯದ ಎರಡು ನಾಣ್ಯ (ಇವು ಸಾರ್ವಜನಿಕ ವಲಯದಲ್ಲಿ ಚಾಲ್ತಿಯಲ್ಲಿಲ್ಲ) ಗಳನ್ನು ಕದ್ದು, ಟಂಕ ಶಾಲೆಯ ತಮ್ಮ ವೈಯಕ್ತಿಕ ಲಾಕರ್ ಅಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗೋಪ್ರೋ ಕದ್ದ ಗಿಳಿ; ಕ್ಯಾಮೆರಾದಲ್ಲಿ ಸೆರೆಯಾಯ್ತು ಗ್ರೇಟ್ ಎಸ್ಕೇಪ್..!
ಅಷ್ಟೇ ಅಲ್ಲ, ಚಬುಕ್ಸ್ವಾರ್ ಅವರ ವಿರುದ್ಧ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದು, ಖುಲಾಸೆ ಕುರಿತು ಚಬುಕ್ಸ್ವಾರ್ ಸಲ್ಲಿಸಿದ ಅರ್ಜಿಯನ್ನು ಬಲ್ಲಾರ್ಡ್ ಪಿಯೇರ್ ಮ್ಯಾಜಿಸ್ಪ್ರೇಟ್ ಕೋರ್ಟ್ ತಿರಸ್ಕರಿಸಿದೆ. ಹಾಗಾಗಿ ಆರೋಪಿಯು ಮುಂಬೈ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಚಬುಕ್ಸ್ವಾರ್ ಪರ ವಾದ ಮಂಡಿಸಿದ ವಕೀಲ ಸ್ವಪ್ನಿಲ್ ಅಂಬುರೆ, ’ಚಬುಕ್ಸ್ವಾರ್ ಅವರು ನಾಣ್ಯಗಳನ್ನು ಕದ್ದಿಲ್ಲ. ಈ ಕುರಿತು ಯಾವುದೇ ಸಾಕ್ಷ್ಯವೂ ಇಲ್ಲ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ಇದುವರೆಗೆ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಹಾಗಾಗಿ ಪ್ರಕರಣ ಖುಲಾಸೆಗೊಳಿಸಬೇಕು’ ಎಂದು ವಾದ ಮಂಡಿಸಿದರು. ಪ್ರಕರಣದ ಕುರಿತು ಮುಂಬಯಿ ಪೊಲೀಸರಿಗೆ ಕೋರ್ಟ್ ನೋಟಿಸ್ ನೀಡಿದೆ. ಅಲ್ಲದೆ, ಪ್ರಕರಣವನ್ನು ಏಪ್ರಿಲ್ 21ಕ್ಕೆ ಮುಂದೂಡಲಾಗಿದೆ.