ದೇಶದಲ್ಲಿ ಕೊರೊನಾ ನಿರೋಧಕ ಲಸಿಕೆ ಅಭಿಯಾನವು ಯಶಸ್ವಿಯಾಗಿ ಸಾಗುತ್ತಿದ್ದು, ವಯಸ್ಕರ ಜತೆಗೆ 12-14 ವರ್ಷದ ಮಕ್ಕಳಿಗೆ ಲಸಿಕೆ ಹಾಗೂ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್‌ಅನ್ನು ಸಹ ಯಶಸ್ವಿಯಾಗಿ ನೀಡಲಾಗುತ್ತಿದೆ.
ಇದರ ಬೆನ್ನಲ್ಲೇ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನೀಡಿದ ನಂತರ ಎರಡನೇ ಡೋಸ್ ನೀಡುವ ನಡುವಿನ ಅವಧಿಯನ್ನು ಕಡಿತಗೊಳಿಸಬಹುದು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದ್ದು, ಈಗ ಕೇಂದ್ರ ಸರಕಾರದ ತೀರ್ಮಾನದತ್ತ ಎಲ್ಲರ ಕಣ್ಣು ನೆಟ್ಟಿವೆ.
’ಜಾಗತಿಕವಾಗಿ ವೈಜ್ಞಾನಿಕ ಅಧ್ಯಯನ ಹಾಗೂ ಪ್ರಯೋಗಗಳ ಸಾಕ್ಷಿಯ ಆಧಾರದ ಮೇಲೆ ಕೋವಿಶೀಲ್ಡ್ ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್ ನಡುವಿನ ಅಂತರವನ್ನು ಕಡಿಮೆಗೊಳಿಸಬಹುದಾಗಿದೆ’ ಎಂದು ರೋಗ ನಿರೋಧಕ ಶಕ್ತಿ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು ಶಿಫಾರಸು ಮಾಡಿದೆ. ಸದ್ಯ 12-16 ವಾರಗಳಲ್ಲಿ ಎರಡನೇ ಡೋಸ್ ನೀಡಬಹುದಾಗಿದ್ದು, ಇದನ್ನು 8-16 ವಾರಗಳಿಗೆ ಇಳಿಸಬಹುದು ಎಂದು ಸಮಿತಿ ಸಲಹೆ ನೀಡಿದೆ.
ಹೀಗೆ ಎರಡನೇ ಡೋಸ್ ಪಡೆಯಲು ಇರುವ ಅಂತರವನ್ನು ಇಳಿಕೆ ಮಾಡುವುದರಿಂದ ವೇಗವಾಗಿ ದೇಶದಲ್ಲಿ ಲಸಿಕೆ ನೀಡಲು ಸಾಧ್ಯವಾಗಲಿದೆ. ಆರರಿಂದ ಏಳು ಕೋಟಿ ಜನರಿಗೆ ಕ್ಷಿಪ್ರವಾಗಿ ಲಸಿಕೆ ನೀಡಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಇದುವರೆಗೆ 180 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. 12-14 ವರ್ಷದ ಸುಮಾರು 17 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಕ್ಷಿಪ್ರವಾಗಿ ಲಸಿಕೆ ನೀಡಿದ ಕಾರಣ ದೇಶವು ಕೊರೊನಾ ವಿರುದ್ಧ ಹೋರಾಡಲು ನೆರವಾಗಿದೆ.