ಹೋಳಿ ಹಬ್ಬವು ಬಾಲ್ಯದ ದಿನಗಳಲ್ಲಿ ಬಣ್ಣ ಬಣ್ಣದೋಕುಳಿಗೆ, ಕೆರೆಕಟ್ಟೆಗಳಲ್ಲಿ ಈಜಾಡಿದ್ದು ಸೇರಿ ಹಲವು ದೃಷ್ಟಿಯಿಂದ ಬಹುತೇಕ ಜನರಿಗೆ ವಿಶಿಷ್ಟವಾಗಿರುತ್ತದೆ. ಈಗಲೂ ದೇಶಾದ್ಯಂತ ಇದೇ ಸಂಭ್ರಮದಿಂದ ಹೋಳಿ ಆಚರಿಸಲಾಗುತ್ತದೆ.
ಪ್ರತಿಯೊಂದು ಭಾಗದಲ್ಲಿಯೂ ವಿಶಿಷ್ಟ ಆಚರಣೆ ಇರುತ್ತದೆ. ಅದರಲ್ಲೂ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಂತೂ ಹೋಳಿ ಹಬ್ಬವು ತುಂಬ ವಿಶಿಷ್ಟವಾಗಿದ್ದು, ಅದು ಏಕೆ ಎಂಬುದನ್ನು ಅವರ ಪುತ್ರಿ ಐಶ್ವರ್ಯಾ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಟ ರಜನಿಕಾಂತ್ ಅವರ ಮೂಲ ಹೆಸರು ’ಶಿವಾಜಿ’ ಆಗಿದ್ದು, ಹೋಳಿ ಹಬ್ಬದ ದಿನದಂದೇ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರು ಶಿವಾಜಿ ಬದಲು ’ರಜನಿಕಾಂತ್’ ಎಂದು ಹೆಸರಿಟ್ಟ ಕಾರಣ ಹೋಳಿ ಹಬ್ಬವು ರಜನಿಕಾಂತ್ ಅವರಿಗೆ ವಿಶೇಷವಾಗಿದೆ.
ಈ ಕುರಿತು ಐಶ್ವರ್ಯಾ ಅವರು ಮಾಹಿತಿ ನೀಡಿದ್ದು, ’ಬಣ್ಣವೇ ಇರದೆ ಬದುಕು ಇರಲು ಹೇಗೆ ಸಾಧ್ಯ ? ನಮ್ಮ ಕುಟುಂಬಕ್ಕೆ ಹೋಳಿ ಹಬ್ಬವು ತುಂಬ ವಿಶಿಷ್ಟವಾಗಿದೆ. ನನ್ನ ಪ್ರೀತಿಯ ತಾತಾ ಕೆ. ಬಾಲಚಂದರ್ ಅವರು ನನ್ನ ತಂದೆಯ ಹೆಸರನ್ನು ’ಶಿವಾಜಿ’ಯಿಂದ ’ರಜನಿಕಾಂತ್’ ಎಂದು ಹೋಳಿ ಹಬ್ಬದಂದೇ ಬದಲಾಯಿಸಿದರು. ಆವಾಗಿನಿಂದಲೇ ರಜನಿಕಾಂತ್ ಎಂಬ ಹೆಸರು ಖ್ಯಾತಿಯಾಯಿತು,’ ಎಂದು ಹೇಳಿದ್ದಾರೆ.
ಇದನ್ನು ತಿಳಿದ ರಜನಿಕಾಂತ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ತಲೈವಾ ಮಾತ್ರವಲ್ಲ ಬಾಲಿವುಡ್ ನಟ ಆಮೀರ್ ಖಾನ್ ಅವರಿಗೂ ಹೋಳಿ ಹಬ್ಬವು ವಿಶೇಷವಾಗಿದೆ. ’ನಾನು ಹೋಳಿ ಹಬ್ಬದಂದು ಹುಟ್ಟಿದ್ದು, ಇದೇ ದಿನ ಆಸ್ಪತ್ರೆಯಲ್ಲಿ ನರ್ಸ್ ನನ್ನ ಕೆನ್ನೆಗೆ ಬಣ್ಣ ಹಚ್ಚಿದ್ದರು’ ಎಂದು ಆಮೀರ್ ಖಾನ್ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದರು.