ಒಂಟಿ ತಾಯಿಯ ದತ್ತು ಪುತ್ರನಿಗೆ, ಅವಳದ್ದೇ ಜಾತಿಯನ್ನು ನಿಗದಿಪಡಿಸಿ ಪ್ರಮಾಣಪತ್ರ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅರ್ಜಿದಾರ ಮಹಿಳೆ ಮುಂಬೈನ ತಾರ್ಡೆಯೊ ಪ್ರದೇಶದ ಅನಾಥಾಲಯದಿಂದ 5 ವರ್ಷದ ಪಪ್ಪು ಎಂಬ ಮಗುವನ್ನು ದತ್ತು ಪಡೆದಿದ್ಲು. ಮಗುವಿನ ನಿಜವಾದ ತಂದೆ-ತಾಯಿ ಯಾರು ಎಂಬುದು ತಿಳಿದಿರಲಿಲ್ಲ.
ನಿಯಮದ ಪ್ರಕಾರ ಮಗುವಿನ ಜನನ ನೋಂದಣಿಗಾಗಿ ಮಹಿಳೆ ಮುಂಬೈ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ಲು. 2010 ರಲ್ಲಿ ಜನನ ಪ್ರಮಾಣಪತ್ರವನ್ನು ನೀಡಲಾಗಿತ್ತು. ಮಹಿಳೆ ಪರಿಶಿಷ್ಟ ಜಾತಿಯಾದ “ಹಿಂದೂ ಮಹವಂಶಿ” ಗೆ ಸೇರಿದವಳಾಗಿದ್ದು, ಮಗುವಿನ ಜಾತಿ ಪ್ರಮಾಣಪತ್ರಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಳು.
ಆದ್ರೆ ಹುಡುಗನ ತಂದೆಯ ಜಾತಿ ದಾಖಲೆ ಸಲ್ಲಿಸದ ಕಾರಣ 2016ರಲ್ಲಿ ಪ್ರಾಧಿಕಾರ ಅರ್ಜಿಯನ್ನು ತಿರಸ್ಕರಿಸಿತ್ತು. ಜಾತಿ ಪ್ರಮಾಣಪತ್ರ ಪಡೆಯಲು ಬಾಲಕನಿಗೆ ಅರ್ಹತೆಯಿಲ್ಲವೆಂದು ಹೇಳಿತ್ತು. ಈ ಆದೇಶದಿಂದ ಅಸಮಾಧಾನಗೊಂಡ ಮಹಿಳೆ ಮುಂಬೈನ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಯನ್ನು ಸಂಪರ್ಕಿಸಿದರು. ಸಮಿತಿ ಕೂಡ 2017ರಲ್ಲಿ ಮೇಲ್ಮನವಿಯನ್ನು ವಜಾಗೊಳಿಸಿ, ಉಪ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವನ್ನೇ ದೃಢಪಡಿಸಿತ್ತು.
ತಾನು ಸಿಂಗಲ್ ಮದರ್ ಆಗಿರೋದ್ರಿಂದ ದತ್ತುಪುತ್ರನಿಗೆ ತನ್ನ ಜಾತಿಯೇ ಅನ್ವಯಿಸುತ್ತದೆ ಅನ್ನೋದು ಮಹಿಳೆಯ ವಾದ. ಮಗುವನ್ನು ಅನಾಥಾಶ್ರಮದಿಂದ ದತ್ತು ಪಡೆದಿದ್ದರಿಂದ, ಆತನ ಜಾತಿಯ ಬಗ್ಗೆ ಸಂಸ್ಥೆ ಅಥವಾ ಮಹಿಳೆಗೆ ತಿಳಿದಿರಲಿಲ್ಲ. ಹಾಗಾಗಿ ಬಾಲಕನಿಗೆ ಜಾತಿ ಪ್ರಮಾಣ ಪತ್ರ ನಿರಾಕರಿಸಿರುವ ಅಧಿಕಾರಿಗಳ ಆದೇಶ ಕಾನೂನು ಬಾಹಿರ ಎಂದು ಕೋರ್ಟ್ ನಲ್ಲಿ ವಾದಿಸಿದ್ದಳು. ಕೋರ್ಟ್ ಆಕೆಯ ವಾದವನ್ನು ಪುರಸ್ಕರಿಸಿದೆ.
“ದತ್ತು ಪಡೆದ ನಂತರ, ಮಗು ಎಲ್ಲಾ ರೀತಿಯಲ್ಲೂ ದತ್ತು ಪಡೆದ ಪೋಷಕರ ಕುಟುಂಬದ ಸದಸ್ಯನಾಗುತ್ತಾನೆ. ಅಂತಹ ಮಗು ದತ್ತು ಪಡೆದ ಪೋಷಕರ ಜಾತಿಯನ್ನು ಸಹ ಪಡೆಯುತ್ತಾನೆ. ನಮ್ಮ ಅಭಿಪ್ರಾಯದಲ್ಲಿ, ವಿವಾದವನ್ನು ಈ ದೃಷ್ಟಿಕೋನದಿಂದ ನೋಡಿದರೂ, ದತ್ತು ಪಡೆಯುವ ಅರ್ಜಿದಾರರ ಮಗನು ಅವಳ ಜಾತಿಯನ್ನು ಪಡೆಯುವ ಅರ್ಹತೆ ಹೊಂದಿದ್ದಾನೆ ಎಂಬುದು ಸ್ಪಷ್ಟ. ಅರ್ಜಿದಾರರು ತಮ್ಮ ಜೈವಿಕ ಪೋಷಕರ ಜಾತಿ ದಾಖಲೆಯನ್ನು ತಿಳಿದಿರದ ಕಾರಣ ಅದನ್ನು ಒದಗಿಸುವಂತೆ ಒತ್ತಾಯಿಸಬಾರದೆಂದು ಕೋರ್ಟ್ ಹೇಳಿದೆ. ಒಂಟಿ ತಾಯಿಯ ದತ್ತು ಪುತ್ರನಿಗೆ, ಅವಳದ್ದೇ ಜಾತಿಯನ್ನು ನಿಗದಿಪಡಿಸಿ ಪ್ರಮಾಣಪತ್ರ ನೀಡುವಂತೆ ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.