ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿ ವೇಳೆ ಅಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ನವೀನ್ ಮೃತಪಟ್ಟಿದ್ದರು. ನವೀನ್ ಅವರ ಮೃತ ದೇಹ ಇಂದು ಬೆಳಿಗ್ಗೆ ಬೆಂಗಳೂರಿಗೆ ತಲುಪಿದ್ದು, ಅಲ್ಲಿಂದ ಈಗ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.
ಮುಂಜಾನೆ 3-30 ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವೀನ್ ಅವರ ಮೃತದೇಹ ತಲುಪಿದ್ದು, ಸಹೋದರ ಸೇರಿದಂತೆ ಹಾಜರಿದ್ದ ಹಲವರ ಕಣ್ಣಾಲಿಗಳು ತುಂಬಿಬಂದವು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಮಾನ ನಿಲ್ದಾಣದಲ್ಲಿ ನವೀನ್ ಮೃತ ದೇಹಕ್ಕೆ ಪುಷ್ಪಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.
ಈಗ ಮೃತದೇಹವನ್ನು ಅಂಬುಲೆನ್ಸ್ ಮೂಲಕ ನವೀನ್ ಅವರ ಹುಟ್ಟೂರಾದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಬಳಿಕ ಅಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.