ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ಬಿಜೆಪಿಯ ಕೆಲ ಹಿರಿಯ ಮುಖಂಡರೆ ಹೊರಟ್ಟಿ ಓರ್ವ ಕಳಂಕಿತ ವ್ಯಕ್ತಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡು, ಟಿಕೆಟ್ ನೀಡಿ ಸಾಧಿಸುವುದೇನಿದೆ ? ಎಂದು ಪ್ರಶ್ನಿಸುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧಿಸಿರುವ ಬಿಜೆಪಿಯ ಕೆಲ ಮುಖಂಡರು, 10 ಅಂಶಗಳನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾಗೆ ಪತ್ರ ಬರೆದಿದ್ದಾರೆ. ಹಲವು ನಾಯಕರ ಸಹಿ ಇರುವ ಪತ್ರದ ಜತೆಗೆ ಹೊರಟ್ಟಿ ವಿರುದ್ಧದ ಕೆಲ ದಾಖಲೆಗಳನ್ನು ರವಾನಿಸಿದ್ದಾರೆ.
ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಗೆ ಈಗಾಗಲೇ 76 ವರ್ಷವಾಗಿದೆ. ಬಿಜೆಪಿ ನಿಯಮದ ಪ್ರಕಾರ ಅವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ.
ಹೊರಟ್ಟಿ ಎರಡು ವೇತನ ಪಡೆದ ಆರೋಪ ಹೊಂದಿದ್ದಾರೆ. 1980ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು, 1999ರವರೆಗೆ ಲ್ಯಾಮಿಂಗ್ಟನ್ ಶಾಲೆಯ ದೈಹಿಕ ಶಿಕ್ಷಕರಾಗಿ ವೇತನ ಪಡೆದಿದ್ದರು.
ಎಸ್ ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಕೆ ಆರೋಪ ಹೊರಟ್ಟಿ ಮೇಲಿದೆ. ಅಲ್ಲದೇ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಹೊರಟ್ಟಿ ಹಿಂದುತ್ವ ವಿರುದ್ಧದ ಚಳುವಳಿಯಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದರು.
ಬಿಜೆಪಿ ಪಕ್ಷದ ಸಿದ್ಧಾಂತಗಳನ್ನು ಹೊರಟ್ಟಿ ಸಂಪೂರ್ಣವಾಗಿ ಯಾವತ್ತೂ ಒಪ್ಪಿಕೊಂಡವರೂ ಅಲ್ಲ.
ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ.
ಬಿಜೆಪಿಯಲ್ಲಿ 17 ಶಾಸಕರು, 3 ಸಂಸದರು, 4 ಪರಿಷತ್ ಸದಸ್ಯರು, ಓರ್ವ ಸಭಾಪತಿ, 3 ಕ್ಯಾಬಿನೆಟ್ ಸಚಿವರು, ಓರ್ವ ಕೇಂದ್ರ ಸಚಿವರು, ರಾಜ್ಯದ ಹಾಲಿ ಹಾಗೂ ಮಾಜಿ ಸಿಎಂಗಳು ಇದ್ದಾರೆ. ಆದರೆ ಜೆಡಿಎಸ್ ನಿಂದ ಒಬ್ಬ ಶಾಸಕರು ಕೂಡ ಇಲ್ಲ.
ಹೊರಟ್ಟಿ ಓರ್ವ ಕಳಂಕಿತ ವ್ಯಕ್ತಿ ಅಂತವರಿಗೆ ಟಿಕೆಟ್ ಕೊಟ್ಟು ಸಾಧಿಸುವುದೇನು ? ಎಂದು ಪ್ರಶ್ನಿಸಿರುವ ಬಿಜೆಪಿ ಮುಖಂಡರು ಸಂಬಂಧ ಪಟ್ಟ ದಾಖಲೆಗಳನ್ನು ಹೈಕಮಾಂಡ್ ಗೆ ಸಲ್ಲಿಸಿದ್ದಾರೆ.