ಹೆಚ್ಚಿನ ಖ್ಯಾತಿ ಹಾಗೂ ಭಾರಿ ಪ್ರಮಾಣದ ಸಂಬಳಕ್ಕಾಗಿ ಸರಕಾರದ ಉನ್ನತ ಹುದ್ದೆ ಪಡೆಯಬೇಕು, ಪದೋನ್ನತಿ ಹೊಂದಬೇಕು, ಬಡ್ತಿ ಪಡೆದು ಐಷಾರಾಮಿ ಜೀವನ ನಡೆಸಬೇಕು ಎಂಬುದು ತುಂಬ ಜನರ ಕನಸಿರುತ್ತದೆ. ಆದರೆ, ಪಂಜಾಬ್ನ ನೂತನ ಅಡ್ವೊಕೇಟ್ ಜನರಲ್ ಆಗಿ ಆಯ್ಕೆಯಾಗಿರುವ ಅನ್ಮೋಲ್ ರತ್ತನ್ ಸಿಧು ಅವರು ಕೇವಲ ಒಂದು ರೂಪಾಯಿ ಕಾನೂನು ಸೇವಾ ಶುಲ್ಕ ಪಡೆಯುತ್ತೇನೆ ಎಂದು ಹೇಳಿದ್ದು, ಸಾರ್ವಜನಿಕರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ವಕೀಲರಾಗಿ ವೃತ್ತಿ ಜೀವನ ಆರಂಭಿಸಿ ತಮ್ಮ ಚಾಣಾಕ್ಷತನದಿಂದಲೇ ಮನೆಮಾತಾಗಿರುವ ಅನ್ಮೋಲ್ ಅವರು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ನಲ್ಲಿ ರಾಜ್ಯದ ಸಾಂವಿಧಾನಿಕ, ಕ್ರಿಮಿನಲ್, ನಾಗರಿಕ, ಸೇವೆ, ಭೂಮಿ ಸೇರಿ ಹಲವು ಸೂಕ್ಷ ವಿಚಾರಗಳ ಕುರಿತು ವಾದ ಮಂಡಿಸಿದ್ದಾರೆ. ಹಲವು ಪ್ರಕರಣಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಹಾಗಾಗಿಯೇ, ಆಮ್ ಆದ್ಮಿ ಪಕ್ಷದ ಸರಕಾರವು ಅನ್ಮೋಲ್ ರತ್ತನ್ ಸಿಧು ಅವರನ್ನು ಅಡ್ವೊಕೇಟ್ ಜನರಲ್ ಆಗಿ ನೇಮಿಸಿದೆ.
ಇವರ ಕಾನೂನು ಹಾಗೂ ಸಾಮಾಜಿಕ ಸೇವೆಗಾಗಿ ರಾಜ್ಯದ ಪರಮೊಚ್ಚ ನಾಗರಿಕ ಪ್ರಶಸ್ತಿಯಾದ ’ಪ್ರಮಾಣಪತ್ರ’ ವನ್ನೂ ನೀಡಿ ಪುರಸ್ಕರಿಸಲಾಗಿದೆ. ಇಷ್ಟೆಲ್ಲ ಹೆಸರು, ಖ್ಯಾತಿ, ಹುದ್ದೆ ಗಳಿಸಿದರೂ ರಾಜ್ಯ ಸರಕಾರದ ಕಾನೂನು ಸೇವೆಗಾಗಿ ಒಂದೇ ರೂಪಾಯಿ ಪಡೆಯುವುದಾಗಿ ಘೋಷಿಸಿದ ಕಾರಣ ಸಾರ್ವಜನಿಕವಾಗಿ ಶ್ಲಾಘನೆ ವ್ಯಕ್ತವಾಗಿದೆ.
ರೈತ ಕುಟುಂಬದಲ್ಲಿ 1958ರ ಮೇ 1ರಂದು ಜನಿಸಿದ ಅನ್ಮೋಲ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ಹಂತ ಹಂತವಾಗಿ ಏಳಿಗೆ ಸಾಧಿಸಿದ್ದಾರೆ. ಹೈಕೋರ್ಟ್ನಲ್ಲಿ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿ ಖ್ಯಾತಿ ಗಳಿಸಿದ್ದಾರೆ. ಇಷ್ಟೆಲ್ಲ ಅಂಶಗಳನ್ನು ಗಮನಿಸಿ ರಾಜ್ಯ ಸರಕಾರವು ಅವರಿಗೆ ಉನ್ನತ ಹುದ್ದೆ ನೀಡಿದೆ.