ಫ್ಲೋರಿಡಾ: ವಾಟರ್‌ಸ್ಪೌಟ್ ಸುಂಟರಗಾಳಿಯಾಗಿ ಮಾರ್ಪಡುತ್ತಿದ್ದಂತೆ ಬೀಚ್‌ನಲ್ಲಿದ್ದ ಜನರು ಭಯಭೀತರಾದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.
ದೊಡ್ಡ ಸುಳಿ (ಜಲಪ್ರವಾಹ ಅಥವಾ ವಾಟರ್‌ಸ್ಪೌಟ್) ದಡದ ಕಡೆಗೆ ಚಲಿಸುತ್ತಾ ಸುಂಟರಗಾಳಿಯಾಗಿ ಬದಲಾಗುತ್ತಿರುವುದನ್ನು ಕಂಡು ಅಲ್ಲಿದ್ದವರು ಆಘಾತಕ್ಕೊಳಗಾದ್ದಾರೆ.
ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ, ಫ್ಲೋರಿಡಾದ ಫೋರ್ಟ್ ಮೈಯರ್ಸ್ ಬೀಚ್‌ನಲ್ಲಿರುವ ಜನರು ಕಿರುಚುತ್ತಾ ದಡದಿಂದ ಓಡಿಹೋಗುವುದನ್ನು ಕಾಣಬಹುದು. ಏಕೆಂದರೆ ದೊಡ್ಡದಾದ ಸುಳಿಯೊಂದು ಬೀಚ್‌ಗೆ ಹತ್ತಿರದಲ್ಲಿ ಗೋಚರಿಸುತ್ತದೆ.
ಕಳೆದ ಶನಿವಾರದಂದು ನಡೆದ ಘಟನೆಯಲ್ಲಿ ಆಸ್ತಿಪಾಸ್ತಿಗೆ ಸಣ್ಣಪುಟ್ಟ ಹಾನಿಯಾಗಿದ್ದನ್ನು ಹೊರತುಪಡಿಸಿದರೆ ಯಾವುದೇ ಗಾಯಗಳು ಅಥವಾ ಪ್ರಾಣಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ. ಹವಾಮಾನಶಾಸ್ತ್ರಜ್ಞ ಡೈಲನ್ ಫೆಡೆರಿಕೊ ಅವರು ಸುಂಟರಗಾಳಿಯಾಗಿ ತಿರುಗಿದ ವಾಟರ್ ಸ್ಪೌಟ್‍ಗೆ ಸಿಲುಕಿದ ಇಬ್ಬರು ಸುರಕ್ಷಿತವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ವಾಟರ್‌ಸ್ಪೌಟ್ ಒಂದು ಸುಳಿಯಾಗಿದ್ದು, ಸಾಮಾನ್ಯವಾಗಿ ಕೊಳವೆಯ ಆಕಾರದಲ್ಲಿರುತ್ತದೆ. ಇದು ಜಲಮೂಲಗಳ ಮೇಲೆ ತಿರುಗುತ್ತದೆ. ಈ ಸುಳಿಗಳು ಭೂಮಿಯ ಮೇಲೆ ಚಲಿಸಿದಾಗ ಅವು ಸುಂಟರಗಾಳಿಯಾಗಿ ಬದಲಾಗುತ್ತವೆ.
ಮೈಕೆಲ್ ಬ್ರಾನಿಕ್ ಹೇಳಿಕೆ ಪ್ರಕಾರ, ಉಷ್ಣವಲಯದ ಅಥವಾ ಉಪೋಷ್ಣವಲಯದ ನೀರಿನಲ್ಲಿ ವಾಟರ್‌ಸ್ಪೌಟ್‌ಗಳು ಹೆಚ್ಚು ಸಾಮಾನ್ಯವಾಗಿದೆ. ಅವು ಸಾಮಾನ್ಯವಾಗಿ ದುರ್ಬಲವಾಗಿರುತ್ತವೆ ಮತ್ತು ಯಾವುದೇ ಚಂಡಮಾರುತದಂತಹ ಹವಾಮಾನ ಪರಿಸ್ಥಿತಿಗಳಿಗೆ ಕಾರಣವಾಗುವುದಿಲ್ಲ.