ಬೆಂಗಳೂರು: ನಾಳೆ ಬೆಳಗ್ಗೆ 10.30 ಕ್ಕೆ ಹೈಕೋರ್ಟ್ ನಿಂದ ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಲಾಗುತ್ತದೆ. ಸಮವಸ್ತ್ರದ ಜತೆಗೆ ಹಿಜಾಬ್ ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದೆ.
ಹೈಕೋರ್ಟ್ ಪೂರ್ಣ ಪೀಠದಿಂದ ನಾಳೆ ಬೆಳಿಗ್ಗೆ ತೀರ್ಪು ಪ್ರಕಟಿಸಲಾಗುತ್ತದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರ ಪೂರ್ಣ ಪೀಠದಿಂದ ಪ್ರಕರಣದ ತೀರ್ಪು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.
ಉಡುಪಿಯ ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಸತತ 11 ದಿನಗಳ ಕಾಲ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದೆ.
ರಾಜ್ಯಾದ್ಯಂತ ಅನೇಕ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ನಡೆದು, ಹೈಕೋರ್ಟ್ ಸಮವಸ್ತ್ರ ಸಂಹಿತೆ ಪಾಲಿಸಬೇಕೆಂದು ಸೂಚಿಸಿತ್ತು. ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿನಿಯರು ಕೋರಿದ್ದು, ನಾಳೆ ಹೈಕೋರ್ಟ್ ನೀಡಲಿರುವ ತೀರ್ಪಿನ ಕುರಿತಾಗಿ ಕುತೂಹಲ ಹೆಚ್ಚಾಗಿದೆ.