ಬೆಂಗಳೂರಿನ ಗೊರಗುಂಟೆಪಾಳ್ಯ ಫ್ಲೈಓವರ್ ಪ್ರಮುಖ ಫ್ಲೈಓವರ್ ಆಗಿದ್ದು, ನೂರಾರು ಊರುಗಳಿಗೆ ತೆರಳುವ ಸಾವಿರಾರು ವಾಹನಗಳು ನಿತ್ಯ ಇದೇ ಫ್ಲೈಓವರ್ ಮೇಲೆಯೇ ಸಂಚರಿಸುತ್ತವೆ. ಅದರಲ್ಲೂ, ರಾತ್ರಿಯಂತೂ ಬೃಹತ್ ಗಾತ್ರದ ವಾಹನಗಳು ಇದರ ಮೂಲಕವೇ ಸಂಚರಿಸುತ್ತವೆ. ಆದರೆ, ಟ್ರಾಫಿಕ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಅವರು ಈ ಫ್ಲೈ ಓವರ್ ಮೇಲೆ ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.
ಫ್ಲೈಓವರ್ ಮೇಲೆ ಬೃಹತ್ ಗಾತ್ರದ ವಾಹನಗಳ ಸಂಚಾರವು ಸುರಕ್ಷಿತವಲ್ಲ ಎಂದು ತಜ್ಞರು ವರದಿ ನೀಡಿದ ಕಾರಣ ಹಾಗೂ ರಾತ್ರಿ ವೇಳೆ ಬೃಹತ್ ವಾಹನಗಳು ಹಾಗೂ ಲಘು ವಾಹನಗಳನ್ನು ಗುರುತಿಸದ ಕಾರಣ ನಾಗರಿಕರ ಹಿತದೃಷ್ಟಿಯಿಂದ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ)ವು ದುರಸ್ತಿ ಕಾರಣಕ್ಕಾಗಿ ಡಿಸೆಂಬರ್ 25ರಂದು ಫ್ಲೈಓವರ್ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಿ, ಜನವರಿ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಿತ್ತು.
ಆದರೆ, ರಿಪೇರಿಯ ಹೊರತಾಗಿಯೂ ಫ್ಲೈಓವರ್ ಸುರಕ್ಷಿತವಾಗಿಲ್ಲ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ನ ತಜ್ಞರ ಸಮಿತಿಯು ವರದಿ ನೀಡಿದೆ.
ಇದರ ಬೆನ್ನಲ್ಲೇ ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಇತ್ತೀಚೆಗೆ ಬಜೆಟ್ ಮಂಡಿಸುವ ವೇಳೆಯೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡ ಫ್ಲೈಓವರ್ ಸುರಕ್ಷಿತ ಅಲ್ಲ ಎಂದಿದ್ದಾರೆ. ಫ್ಲೈಓವರ್ ಕುರಿತು ಅಪಾಯದ ಮುನ್ಸೂಚನೆ ನೀಡಿರುವ ಕಾರಣ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲಾಗಿದೆ.