ಆಧುನಿಕ ಕಾಲದ ಚಿಣ್ಣರು ನಟನೆ ಮಾಡುವುದು, ಹಾಡು ಹೇಳುವುದು, ಡೈಲಾಗ್ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫಾಲೋವರ್ಗಳನ್ನು ಹೊಂದುವುದು ಸಾಮಾನ್ಯ. ಆದರೆ, ತಮಿಳುನಾಡಿನಲ್ಲೊಬ್ಬ ಏಳು ವರ್ಷದ ಪೋರ ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾನೆ ಎಂದರೆ ನಂಬಲೇಬೇಕು.
ಮಕ್ಕಳು ಕಾಮಿಕ್ಸ್ ನೋಡುವುದು ಸಾಮಾನ್ಯ. ಅದರಲ್ಲಿ ಬರುವ ಪಾತ್ರಗಳ ಹೆಸರನ್ನು ಬಡಬಡನೆ ಹೇಳುವುದು ಸಹ ಸಾಮಾನ್ಯವೇ. ಆದರೆ, ತಮಿಳುನಾಡಿನ ನಿಧೀಶ್ ವಿ.ಬಿ. ಎಂಬ ಏಳು ವರ್ಷದ ಪೋರನು ಡಿಸಿ ಕಾಮಿಕ್ಸ್ನಲ್ಲಿ ಬರುವ 60 ಪಾತ್ರಗಳ ಹೆಸರುಗಳನ್ನು ಒಂದೇ ನಿಮಿಷದಲ್ಲಿ ಪಟಪಟನೆ ಹೇಳುವ ಮೂಲಕ ಇದುವರೆಗೆ ಇದ್ದ ಗಿನ್ನೆಸ್ ವಿಶ್ವದಾಖಲೆಯನ್ನು ಮುರಿದಿದ್ದಾನೆ. ಆ ಮೂಲಕ ಹೊಸ ವಿಶ್ವದಾಖಲೆ ಬರೆದಿದ್ದಾನೆ.
ಕಳೆದ ಫೆಬ್ರವರಿ 22ರಂದು ವಿಧೀಶ್ ಇಂತಹ ದಾಖಲೆ ಬರೆದಿದ್ದಾನೆ. ಇದರ ಕುರಿತು ಗಿನ್ನೆಸ್ ವಿಶ್ವದಾಖಲೆ ಸಂಸ್ಥೆಯ ವೆಬ್ಸೈಟ್ನಲ್ಲಿಯೇ ಉಲ್ಲೇಖಿಸಲಾಗಿದೆ. ಅಲ್ಲದೆ, ಹಲವರು ಈತನ ಫೋಟೊವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿ ಶುಭಕೋರಿದ್ದಾರೆ. ಇದಕ್ಕೂ ಮೊದಲು ಒಂದು ನಿಮಿಷದಲ್ಲಿ 52 ಪಾತ್ರಗಳ ಹೆಸರುಗಳನ್ನು ಹೇಳಿದ್ದು ವಿಶ್ವದಾಖಲೆಯಾಗಿತ್ತು.
ಡಿಸಿ ಕಾಮಿಕ್ಸ್ನಲ್ಲಿ ಬ್ಯಾಟ್ಮ್ಯಾನ್, ಸೂಪರ್ ಮ್ಯಾನ್, ವಂಡರ್ ವುಮನ್, ಜೋಕರ್ ಸೇರಿ ಹಲವು ಪಾತ್ರಗಳಿವೆ. ಅವುಗಳನ್ನು ನೆನಪಿಸಿಕೊಂಡು ಒಂದೇ ನಿಮಿಷದಲ್ಲಿ, ಸೆಕೆಂಡಿಗೆ ಒಂದು ಪಾತ್ರದಂತೆ 60 ಪಾತ್ರಗಳ ಹೆಸರನ್ನು ಹೇಳಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ. ವಿಧೀಶ್ ಬಹುಮುಖ ಪ್ರತಿಭೆಯಾಗಿದ್ದು, ಇನ್ಸ್ಟಾಗ್ರಾಂ ರೀಲ್ಗಳನ್ನು ಸಹ ಮಾಡುತ್ತಾನೆ. ನಟನೆ, ಹಾಡು ಹಾಡುವುದು ಈತನ ಹವ್ಯಾಸಗಳಾಗಿದ್ದು, ತಮಿಳುನಾಡಿನಲ್ಲಿ ಸೆಲೆಬ್ರಿಟಿಯೇ ಆಗಿದ್ದಾನೆ. ಈತನ ಸಾಧನೆಗಳ ಕುರಿತು ಹಲವು ಮಾಧ್ಯಮಗಳು ವರದಿ ಸಹ ಮಾಡಿವೆ.