ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಅಪ್ಪು ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ‘ಜೇಮ್ಸ್’ ನಿರ್ಮಾಣವಾಗಿದ್ದು, ಕರ್ನಾಟಕ ಮಾತ್ರವಲ್ಲದೆ, ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಆಸ್ಟ್ರೇಲಿಯಾದಲ್ಲಿ ‘ಜೇಮ್ಸ್’ ನೂರಕ್ಕೂ ಅಧಿಕ ಪ್ರದರ್ಶನ ಕಾಣಲಿದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಪೂರ್ಣಗೊಳಿಸಿದೆ. ಆಸ್ಟ್ರೇಲಿಯಾ ಅಭಿಮಾನಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ‘ಜೇಮ್ಸ್’ ವೀಕ್ಷಿಸಲು ಕಾತರರಾಗಿದ್ದಾರೆ.
ಅಮೆರಿಕದಲ್ಲಿ 32 ರಾಜ್ಯಗಳಲ್ಲಿ ಬಿಡುಗಡೆಗೆ ಸ್ಯಾಂಡಲ್ವುಡ್ ಗೆಳೆಯರ ಬಳಗ ವ್ಯವಸ್ಥೆ ಮಾಡಿದೆ. ಕನ್ನಡದ ಯಾವ ಚಿತ್ರಕ್ಕೂ ಸಿಗದಷ್ಟು ದೊಡ್ಡ ಓಪನಿಂಗ್ ‘ಜೇಮ್ಸ್’ಗೆ ಸಿಗುತ್ತಿದೆ. ರಷ್ಯಾ, ಉಕ್ರೇನ್ ಹೊರತುಪಡಿಸಿ ಯೂರೋಪ್ ನ ಬಹುತೇಕ ಕಡೆಗಳಲ್ಲಿ ‘ಜೇಮ್ಸ್’ ಬಿಡುಗಡೆಯಾಗಲಿದ್ದು, ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿವೆ.
ಬ್ರಿಟನ್, ಸಿಂಗಾಪುರ, ಮಲೇಷಿಯಾ, ನೈಜೇರಿಯಾ, ಕೀನ್ಯಾ, ಜಪಾನ್, ಉಗಾಂಡಾ, ತಾಂಜೇನಿಯಾ ಮೊದಲಾದ ದೇಶಗಳು ಸೇರಿದಂತೆ ವಿಶ್ವದಾದ್ಯಂತ ‘ಜೇಮ್ಸ್’ ಬಿಡುಗಡೆಯಾಗಲಿದೆ.
ಕರ್ನಾಟಕದಲ್ಲಿ ಪುನೀತ್ ಅಭಿಮಾನಿಗಳು ನೋವಿನಲ್ಲೂ ನೆಚ್ಚಿನ ನಟನ ತೆರೆಮೇಲೆ ಕಣ್ತುಂಬಿಕೊಳ್ಳಲು ಕಾತರಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ ಬೇರೆ ರಾಜ್ಯಗಳು, ದೇಶಗಳಲ್ಲಿಯೂ ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪುನೀತ್ ರಾಜಕುಮಾರ್ ಅಭಿನಯಿಸಿದ ಕೊನೆಯ ಚಿತ್ರ ಇದಾಗಿದ್ದು, ಎಲ್ಲೆಲ್ಲೂ ‘ಜೇಮ್ಸ್’ ಜಾತ್ರೆ ನಡೆಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.