ಭೋಪಾಲ್: ರಾಜ್ಯದಲ್ಲಿ ಅನಧಿಕೃತ ಅಂಗಡಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾಭಾರತಿ ಅವರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಭಾನುವಾರ ಮದ್ಯದಂಗಡಿಯನ್ನು ಧ್ವಂಸಗೊಳಿಸಿದ್ದಾರೆ.
ಟ್ವಿಟರ್‌ನಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಅವರು ಮದ್ಯದ ಅಂಗಡಿಯೊಂದಕ್ಕೆ ಕಲ್ಲು ಎಸೆಯುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಭೋಪಾಲ್‌ನ ಬರ್ಖೇಡಾ ಪಠಾನಿ ಆಜಾದ್ ನಗರದಲ್ಲಿರುವ ಲೇಬರ್ ಕಾಲೋನಿಯಲ್ಲಿರುವ ಮದ್ಯದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತವನ್ನು ಕೇಳಿಕೊಂಡಿದ್ದಾರೆ.
ಭೋಪಾಲ್ ನ ಬರ್ಖೇಡಾ ಪಠಾನಿ ಆಜಾದ್ ನಗರದಲ್ಲಿ, ಲೇಬರ್ ಕಾಲೋನಿಯಲ್ಲಿ ಮದ್ಯದ ಅಂಗಡಿಗಳ ಸರಪಳಿ ಇದೆ, ಇಲ್ಲಿನ ನಿವಾಸಿಗಳು ಮತ್ತು ಮಹಿಳೆಯರು ಈ ಅಂಗಡಿಗಳನ್ನು ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರೂ, ಕ್ರಮಕೈಗೊಂಡಿರಲಿಲ್ಲ.
ಒಂದು ವಾರದೊಳಗೆ ಅಂಗಡಿ ಮುಚ್ಚುವಂತೆ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದೇನೆ ಎಂದು ಉಮಾಭಾರತಿ ಅವರು ಹೇಳಿದರು. ರಾಜ್ಯದಲ್ಲಿ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿರುವುದು ಇದೇ ಮೊದಲಲ್ಲ.