ಮಾರ್ಚ್ 16ರಂದು ಪಂಜಾಬ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್, ರಾಜ್ಯದಲ್ಲಿರುವ ಅನೇಕ ವಿವಿಐಪಿಗಳು ಸೇರಿದಂತೆ ಮಾಜಿ ಸಂಸದರು ಹಾಗೂ ಶಾಸಕರಿಗೆ ಒದಗಿಸಲಾದ ಭದ್ರತೆಯನ್ನು ಹಿಂಪಡೆಯುವಂತೆ ಆದೇಶ ಹೊರಡಿಸಿದ್ದಾರೆ.
ಮಾನ್ ಇಂದು ಹೊರಡಿಸಿರುವ ಆದೇಶದ ಪ್ರಕಾರ, ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಬಾದಲ್ ಕುಟುಂಬಕ್ಕೆ ನೀಡಲಾದ ಭದ್ರತೆ, ಮಾಜಿ ಸಿಎಂಗಳಾದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಚರಣ್ಜೀತ್ ಸಿಂಗ್ ಚನ್ನಿಯನ್ನು ಹೊರತುಪಡಿಸಿ ಮಿಕ್ಕೆಲ್ಲ ನಾಯಕರ ಭದ್ರತೆಯನ್ನು ಹಿಂಪಡೆಯಲಾಗಿದೆ.
ಪಂಜಾಬ್ನ ನಿಯೋಜಿತ ಸಿಎಂ ಭಗವಂತ್ ಮಾನ್ ಇಂದು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚನೆಯ ಹಕ್ಕನ್ನು ಮಂಡಿಸಿದರು.
ನಾನು ರಾಜ್ಯಪಾಲರನ್ನು ಭೇಟಿಯಾಗಿ ನಮ್ಮ ಶಾಸಕರ ಬೆಂಬಲದ ಪತ್ರವನ್ನು ಹಸ್ತಾಂತರಿಸಿದ್ದೇನೆ. ನಾವು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದೇವೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.