ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿರುವ ಠೇವಣಿಗಳು ಪ್ರಸಕ್ತ ಹಣಕಾಸು ವರ್ಷ 2021-22ರಲ್ಲಿ ಶೇಕಡಾ 8.1 ಬಡ್ಡಿ ದರವನ್ನು ಪಡೆಯಲಿದೆ ಎಂದು ಇಪಿಎಫ್ಓ ಪ್ರಕಟಣೆ ನೀಡಿದೆ. ಅಸ್ಸಾಂನ ಗುವಾಹಟಿಯಲ್ಲಿ ನಡೆದ 230ನೇ ಇಪಿಎಫ್ಒ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
40 ಬೇಸಿಸ್ ಪಾಯಿಂಟ್ಗಳ ಕಡಿತದೊಂದಿಗೆ ಈ ಹೊಸ ಬಡ್ಡಿ ದರವು ಕಳೆದ ನಾಲ್ಕು ದಶಕಗಳಲ್ಲಿಯೇ ಅತ್ಯಂತ ಕಡಿಮೆ ಬಡ್ಡಿ ದರವಾಗಿದೆ. ಈ ನಿರ್ಧಾರದಿಂದ ದೇಶದ ಸುಮಾರು 5 ಕೋಟಿ ಇಪಿಎಫ್ಓ ಚಂದಾದಾರರಿಗೆ ಹಿನ್ನಡೆಯಾದಂತಾಗಿದೆ. 1977-78ರಲ್ಲಿ ಇಪಿಎಫ್ಓ ಬಡ್ಡಿ ದರ ಶೇಕಡಾ 8ರಷ್ಟಿತ್ತು. ಇದಾದ ಬಳಿಕದ ಇದೇ ಮೊದಲ ಬಾರಿಗೆ ಪಿಎಫ್ ಬಡ್ಡಿದರ ಇಷ್ಟು ಕನಿಷ್ಟ ಮಟ್ಟಕ್ಕೆ ಕುಸಿದಿದೆ.
ಕಳೆದ ಹಣಕಾಸು ವರ್ಷದಲ್ಲಿ ಬಡ್ಡಿ ದರವನ್ನು ಶೇ.8.5ರಲ್ಲೇ ಇರಿಸಲಾಗಿತ್ತು. ಇದನ್ನು ಮಾರ್ಚ್ 2021 ರಲ್ಲಿ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ನಿರ್ಧರಿಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಂತಿಮ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು 2021-22ರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಗಳ ಮೇಲೆ ಶೇಕಡಾ 8.1 ಪ್ರತಿಶತ ಬಡ್ಡಿದರವನ್ನು ಒದಗಿಸಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.