ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಾಯಕ, ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅಧಿಕೃತವಾಗಿ ರಾಜೀನಾಮೆ ನೀಡಿದ್ದು, ಜೆಡಿಎಸ್ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎಂ.ಇಬ್ರಾಹಿಂ, ನಾನು ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದು, ಶೀಘ್ರದಲ್ಲಿಯೇ ಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದರು.
ಇಡೀ ಉತ್ತರ ಭಾರತದಲ್ಲಿ ಇಂದು ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. 1995ರಲ್ಲಿ ಇದ್ದಂತೆ 2022ರಲ್ಲಿ ಅದೇ ಪರಿಸ್ಥಿತಿ ಬಂದಿದೆ. ನಾನು ಕಾಂಗ್ರೆಸ್ ಬಿಟ್ಟು ಹೋಗುತ್ತಿರುವ ಬಗ್ಗೆ ನನಗೆ ನೋವಿದೆ. ನಾನು ಎಲ್ಲಿಯೂ ಹೋಗಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ ಇಂದು ನನಗೆ ಬೇರೆ ಪಕ್ಷದ ಬಾಗಿಲು ತೆರೆದಿದೆ ಎಂದು ಹೇಳುವ ಮೂಲಕ ಜೆಡಿಎಸ್ ಸೇರ್ಪಡೆ ಬಗ್ಗೆ ಖಚಿತ ಪಡಿಸಿದ್ದಾರೆ.
ನನಗೆ ಇರುವ ಸುಲಭ ದಾರಿ ಜೆಡಿಎಸ್. ಇಂದು ಅಥವಾ ನಾಳೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಜತೆ ಮಾತುಕತೆ ನಡೆಸುತ್ತೇನೆ. ಇನ್ನೊಂದು ಸುತ್ತಿನ ಚರ್ಚೆ ಬಳಿಕ ನಿರ್ಧಾರ ತಿಳಿಸುತ್ತೇನೆ. ಚರ್ಚೆಯ ಬಳಿಕ ರಾಜ್ಯದಲ್ಲಿ ಪಕ್ಷ ಸಂಘಟನೆ ಬಗ್ಗೆ ಪ್ರಕಟಿಸುತ್ತೇನೆ ಎಂದು ತಿಳಿಸಿದರು.