ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ತನ್ನ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಅಂಗೀಕರಿಸಿದೆ.
ಅತ್ಯಾಚಾರ ಸಂತ್ರಸ್ತೆಯು ಕೇವಲ 10 ವರ್ಷ ಪ್ರಾಯದವಳಾಗಿದ್ದು ಗರ್ಭಾವಸ್ಥೆಯಿಂದ ಈಕೆಯ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪಿ.ವಿ. ಕುಂಯಿಕೃಷ್ಣನ್ ನೇತೃತ್ವದ ಪೀಠ, ಪುತ್ರಿಗೆ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ ಬಾಲಕಿಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ.
ಈ ಕೃತ್ಯವನ್ನು ಎಸಗಿದವರು ಬಾಲಕಿಯ ಸ್ವಂತ ತಂದೆ ಎಂಬ ಆರೋಪವಿದೆ. ಒಂದು ವೇಳೆ ಈ ಆರೋಪ ನಿಜವಾದಲ್ಲಿ ನಾನು ನಾಚಿಕೆ ಅನುಭವಿಸುತ್ತೇನೆ. ಅಲ್ಲದೇ ಈ ಕಾರಣಕ್ಕಾಗಿ ಸಂಪೂರ್ಣ ನಾಗರಿಕ ಸಮಾಜ ತಲೆ ತಗ್ಗಿಸಲೇಬೇಕು. ಕಾನೂನು ವ್ಯವಸ್ಥೆಯು ಖಂಡಿತವಾಗಿಯೂ ಆರೋಪಿಗೆ ಶಿಕ್ಷಿಸಲಿದೆ ಎಂಬ ನಂಬಿಕೆ ನನಗಿದೆ ಎಂದು ನ್ಯಾಯಪೀಠ ಹೇಳಿದೆ.