ದೆಹಲಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸ್ ಸಿಬ್ಬಂದಿಗೆ ದುಪ್ಪಟ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ದೆಹಲಿ ಪೊಲೀಸ್ ಇಲಾಖೆ ಹೊಸ ಆದೇಶವನ್ನು ಹೊರಡಿಸಿದೆ.
ಮಾರ್ಚ್ 2ರಂದು ಹೊರಡಿಸಲಾದ ಆದೇಶದಲ್ಲಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಜಯ್ ಕ್ರಿಶನ್ ಶರ್ಮಾ ಸರ್ಕಾರಿ ವಾಹನಗಳಲ್ಲಿ ಮುಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ಸರ್ಕಾರಿ ಅಧಿಕಾರಿಗಳು ಸೀಟ್ ಬೆಲ್ಟ್ ಧರಿಸದೇ ಇರುವುದನ್ನು ಅನೇಕ ಬಾರಿ ಗಮನಿಸಿದ್ದೇವೆ ಎಂದು ಹೇಳಿದರು.
ಎಲ್ಲಾ ಪೊಲೀಸ್ ಸಿಬ್ಬಂದಿ ಈ ವಿಚಾರವಾಗಿ ಇನ್ನಷ್ಟು ಸಂವೇದನಾಶೀಲರಾಗಬೇಕು ಹಾಗೂ ತಿದ್ದುಪಡಿ ಮಾಡಲಾಗಿರುವ ಮೋಟಾರು ವಾಹನ ಕಾಯಿದೆಗಳ ಪ್ರಕಾರ, ಪೊಲೀಸ್ ಸಿಬ್ಬಂದಿಯೇ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದರೆ ಅವರಿಗೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಆದ್ದರಿಂದ ಪೊಲೀಸ್ ಅಧಿಕಾರಿಗಳು ಇಲಾಖೆಗೆ ಉಂಟಾಗುವ ಮುಜುಗರವನ್ನು ತಪ್ಪಿಸಲು, ದಂಡದಿಂದ ಪಾರಾಗಲು ಸಂಚಾರಿ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.