ಹೈದರಾಬಾದ್ ಮೂಲದ ಮುಸ್ಲಿಂ ಆಧಾರಿತ ರಾಜಕೀಯ ಪಕ್ಷವಾದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 100 ಸ್ಥಾನಗಳ ಪೈಕಿ 99 ಸ್ಥಾನಗಳಲ್ಲಿ ತನ್ನ ಠೇವಣಿಯನ್ನು ಕಳೆದುಕೊಂಡಿದೆ. 2017ರ ಚುನಾವಣೆಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಮತವನ್ನು ಗಳಿಸಿದೆಯಾದರೂ ಸಹ ಅಸಾದುದ್ದೀನ್ ಓವೈಸಿ ನೇತೃತ್ವದ ಪಕ್ಷವು ವಿಶೇಷವಾಗಿ ಮುಸ್ಲಿಂ ಜನರು ಹೆಚ್ಚಿರುವ ಕ್ಷೇತ್ರದಲ್ಲಿಯೂ ಗೆಲುವು ದಾಖಲಿಸಿಲ್ಲ.
ಮುಸ್ಲಿಂ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರಗಳಲ್ಲಿ AIMIM ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 38 ಅಭ್ಯರ್ಥಿಗಳನ್ನು ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದರೂ ಸಹ ಬಹುತೇಕ ಎಲ್ಲಾ ಕಡೆಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬಹುತೇಕ ಎಲ್ಲಾ ಸ್ಥಾನಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಆದರೆ AIMIM ವಕ್ತಾರ ವಾರಿಸ್ ಪಠಾಣ್, ಉತ್ತರ ಪ್ರದೇಶದಲ್ಲಿ ಪಕ್ಷ ಬೆಳೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಠೇವಣಿ ಉಳಿಸಿದ ಏಕೈಕ ಅಭ್ಯರ್ಥಿ ಎಂದರೆ ಮುಬಾರಕ್‌ಪುರ ಕ್ಷೇತ್ರದ ಶಾ ಆಲಂ ಅಲಿಯಾಸ್ ಗುಡ್ಡು ಜಮಾಲಿ. ಈ ಹಿಂದೆ ಬಹುಜನ ಸಮಾಜವಾದಿ ಪಕ್ಷದಲ್ಲಿದ್ದ ಗುಡ್ಡು ಜಮಾಲಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ AIMIM ಸೇರಿ ಗುಡ್ಡು ಅಲ್ಲಿಂದ ಟಿಕೆಟ್ ಪಡೆದಿದ್ದರು. ಮುಬಾರಕ್‌ಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗುಡ್ಡು ಠೇವಣಿ ಉಳಿಸಿಕೊಂಡಿದ್ದಾರೆ.